ಮುಂಬೈ ಸರಕಾರಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರ, ಯೋಗ ಕಡ್ಡಾಯ
.jpg)
ಮುಂಬೈ,ಆ.25: ಮುಂಬೈ ನಗರದಲ್ಲಿ ಸರಕಾರಿ ಶಾಲೆಗಳಲ್ಲಿ ಯೋಗ ಮತ್ತು ಸೂರ್ಯನಮಸ್ಕಾರವನ್ನು ಕಡ್ಡಾಯಗೊಳಿಸಲಾಗಿದೆ ಎಂದು ವರದಿಯಾಗಿದೆ.ಕಾರ್ಪೊರೇಶನ್‌ನ ಬಿಜೆಪಿ ಸದಸ್ಯ ಸಮಿತ ಕಾಂಬ್ಲೆಯವರ ಪ್ರಸ್ತಾವವನ್ನು ಆಡಳಿತಪಕ್ಷಗಳಾದ ಶಿವಸೇನೆ-ಬಿಜೆಪಿ ಅಂಗೀಕರಿಸಿವೆ. ಬಿಜೆಪಿ ಸದಸ್ಯರ ಪ್ರಸ್ತಾವವನ್ನು ಎರಡು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಶಿವಸೇನೆ ಬೆಂಬಸಲಿಲ್ಲ ಹಾಗೂ ವಿರೋಧಿಸಲಿಲ್ಲ.ಆದರೆ ಪ್ರತಿಪಕ್ಷಗಳ ವಿರೋಧದ ನಡುವೆ ಪ್ರಸ್ತಾವವನ್ನು ಮತಕ್ಕೆ ಹಾಕಿದಾಗ ಅದು ಬೆಂಬಲಿಸಿದೆ ಎಂದು ವರದಿ ತಿಳಿಸಿದೆ.
ಸೂರ್ಯನಮಸ್ಕಾರ ಮತ್ತು ಯೋಗವನ್ನು ಕಡ್ಡಾಯಗೊಳಿಸದೆ ಐಚ್ಛಿಕಗೊಳಿಸಬೇಕೆಂದು ಕಾಂಗ್ರೆಸ್ ಸೂಚಿಸಿದ್ದರೆ, ಸಮಾಜವಾದಿ ಪಕ್ಷ, ಹಿಂದೂ ಆಚಾರದ ಭಾಗವಾದ ಸೂರ್ಯನಮಸ್ಕಾರವನ್ನು ಕೈಬಿಡಬೇಕೆಂದು ಸಮಾಜವಾದಿ ಆಗ್ರಹಿಸಿತ್ತು. ಆದರೆ ಈ ಯಾವ ಸಲಹೆಯೂ ಸ್ವೀಕೃತವಾಗಲಿಲ್ಲ. ಶಾಲೆಗಳಲ್ಲಿ ಹಿಂದುತ್ವದ ಆಶಯವನ್ನು ಪ್ರಚಾರಮಾಡಲಾಗುತ್ತಿದೆ ಎಂದು ಸಮಾಜವಾದಿ ಪಾರ್ಟಿ ನಾಯಕ ರಯೀಸ್ ಶೇಖ್ ಆರೋಪಿಸಿದ್ದಾರೆ. ಒಂದುವೇಳೆ ಯೋಗ ಮತ್ತು ಸೂರ್ಯನಮಸ್ಕಾರಗಳನ್ನು ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆತ್ತವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲಾರರು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರ ಸಭೆ ಪಾಸು ಮಾಡಿರುವ ಸೂಚನೆಗೆ ಮುನ್ಸಿಪಲ್ ಕಮೀಶನರ್ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಅಡಿಯಲ್ಲಿ ನಗರದಲ್ಲಿ 1,237 ಶಾಲೆಗಳಿವೆ. ಇಲ್ಲಿ 5.40 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದು ವರದಿ ತಿಳಿಸಿದೆ.





