ಮಂಗಳೂರಿನಲ್ಲಿ ನಟಿ ರಮ್ಯಾರ ಕಾರಿಗೆ ಮೊಟ್ಟೆ ಎಸೆತ,ಲಾಠಿ ಪ್ರಹಾರ, ಹಲವರು ವಶಕ್ಕೆ

ಮಂಗಳೂರು, ಆ.25: ಪಾಕಿಸ್ತಾನದ ಜನರ ಪರ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಇಂದು ಸಂಜೆ ನಗರಕ್ಕೆ ಆಗಮಿಸಿದ್ದು, ಈ ಸಂದರ್ಭ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚ ಕಾರ್ಯಕರ್ತರು ರಮ್ಯಾರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.
ರಮ್ಯಾ ಆಗಮಿಸುತ್ತಿರುವ ವಿಚಾರ ತಿಳಿದ ಬಿಜೆಪಿ ಯುವ ಮೋರ್ಚ ಕಾರ್ಯಕರ್ತರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು ಈ ವೇಳೆ ರಮ್ಯಾರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ. ಈ ಸಂದರ್ಭ ಪ್ರತಿಭಟನಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಘಟನೆಗೆ ಸಂಬಂಧಿಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ದಾರಿಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚ ಕಾರ್ಯಕರ್ತರು ರಮ್ಯಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಗರದ ಕದ್ರಿಯಲ್ಲಿ ಆಯೋಜಿಸಲಾಗಿರುವ ಶ್ರೀಕೃಷ್ಣಾಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಅವರು ಆಗಮಿಸಿದ್ದರು.
ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.





