ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಬಿ.ಎ.ಮೊಹಿದಿನ್ ಗೆ ಪೌರ ಸನ್ಮಾನ

ಮಂಗಳೂರು, ಆ.25: ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿಯನ್ನು ಪಡೆದಿರುವ ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವ ಹಾಗೂ ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವರೂ ಆಗಿರುವ ಬಿ.ಎ. ಮೊಹಿದಿನ್ರವರಿಗೆ ಸೆಪ್ಟಂಬರ್ 15ರಂದು ಪೌರ ಸನ್ಮಾನವನ್ನು ಆಯೋಜಿಸಲಾಗಿದೆ.
ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾರವರು ತಮ್ಮ ಕಚೇರಿಯಲ್ಲಿಂದು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂದು ಸಂಜೆ 4 ಗಂಟೆಗೆ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಗರದ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೌರ ಸನ್ಮಾನ ಸಮಿತಿಯನ್ನು ರಚಿಸಲಾಗಿದ್ದು, ಕಾರ್ಯದರ್ಶಿಯಾಗಿ ಮುಸ್ತಫಾ ಸುಳ್ಯ, ಹಣಕಾಸು ಸಮಿತಿ ಸಂಚಾಲಕರಾಗಿಎಸ್.ಎಂ. ರಶೀದ್ ಹಾಜಿ ಹಾಗೂ ಕಾರ್ಯಕ್ರಮ ವ್ಯವಸ್ಥಾಪನಾ ಸಮಿತಿಗೆ ಲಾರೆನ್ಸ್ ಡಿಸೋಜಾರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಆರೋಗ್ಯ ಸಚಿವ ಕೆ.ಆರ್. ರಮೇಶ್ ಅಭಿನಂದನಾ ಭಾಷಣ ಮಾಡಲಿದ್ದು, ಗೃಹ ಸಚಿವ ಡಾ. ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಮ್ಮ ಶಿಫಾರಸಿನ ಮೇರೆಗೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 13 ಮಂದಿಗೆ ಚಿಕಿತ್ಸೆಗಾಗಿ ಬಿಡುಗಡೆಗೊಂಡ ಒಟ್ಟು 10,14,032 ರೂ.ಗಳ ಪರಿಹಾರಧನದ ಚೆಕ್ಕನ್ನು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಹಸ್ತಾಂತರಿಸಿದರು.
ಗೋಷ್ಠಿಯಲ್ಲಿ ಬಿ.ಎ. ಮೊಹಿದಿನ್ ಪೌರ ಸನ್ಮಾನ ಸಮಿತಿ ಹಣಕಾಸು ವಿಭಾಗದ ಸಂಚಾಲಕ ಹಾಜಿ ಎಸ್.ಎಂ. ರಶೀದ್, ಮನಪಾ ಸದಸ್ಯ ಅಬ್ದುಲ್ ಲತೀಫ್, ಮಮತಾ ಶೆಣೈ, ನಮಿತಾ ಡಿ. ರಾವ್, ಗಂಗಾಧರ್, ಆನಂದ ಸೋನ್ಸ್, ಸುರೇಶ್ ಪೆಂಗಲ್, ಸಂಜೀವ ಕೋಟ್ಯಾನ್, ಪಿಯುಸ್ ಮೊಂತೆರೋ, ರಫೀಕ್ ಮೊದಲಾದವರು ಉಪಸ್ಥಿತರಿದ್ದರು.







