ಬಂಟ್ವಾಳ: ಆ. 29, 30ರಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ
ಬಂಟ್ವಾಳ, ಆ. 25: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ - 2016 ಸ್ಪರ್ಧೆ ಆ. 29, 30ರಂದು ಎರಡು ದಿನಗಳ ಕಾಲ ಬಂಟ್ವಾಳ ತಾಲೂಕಿನ ಕಾವಲಪಡೂರು ಗ್ರಾಮದ ವಗ್ಗ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ತಿಳಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡ್ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಸಚಿವ ಯು.ಟಿ.ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಇನ್ನಿತರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 7 ಶೈಕ್ಷಣಿಕ ವಲಯಗಳ ಕಿರಿಯ ಪ್ರಾಥಮಿಕ ವಿಭಾಗದಲ್ಲಿ (1ರಿಂದ 4ನೆ ತರಗತಿ) 350 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ವಿಭಾಗದಲ್ಲಿ (5ರಿಂದ 7ನೆ ತರಗತಿ) 350 ವಿದ್ಯಾರ್ಥಿಗಳು, ಪ್ರೌಢ ವಿಭಾಗದಲ್ಲಿ (8ರಿಂದ 10ನೆ ತರಗತಿ) 147 ಹಾಗೂ 9ರಿಂದ 12ನೆ ತರಗತಿಯ ವಿದ್ಯಾರ್ಥಿಗಳ ಕಲೋತ್ಸವ ಸ್ಪರ್ಧೆಯಲ್ಲಿ ಸುಮಾರು 224 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1071 ವಿದ್ಯಾರ್ಥಿಗಳು ಭಾಗವಹಿಸಲಿದ್ದು ಒಟ್ಟು 26 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದ ಅವರು, ಸುಮಾರು 75 ಶಿಕ್ಷಕರು ಭಾಗವಹಿಸಲಿರುವರು ಎಂದರು. ಸ್ಪರ್ಧೆಯಲ್ಲಿ ಜಿಲ್ಲೆಯ ಅನುಭವಿ ಅತಿಥಿ ತೀರ್ಪುಗಾರರು ಮತ್ತು ಆಯಾ ಕ್ಷೇತ್ರದ ಪರಿಣಿತ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸುವರು. ಆ. 29ರಂದು ಪ್ರಾಥಮಿಕ ವಿಭಾಗ, ಆ. 30ರಂದು ಪ್ರೌಢ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ವಿಶೇಷವಾಗಿ ಈ ಜಿಲ್ಲೆಯ ಗಂಡು ಕಲೆಯಾದ ಯಕ್ಷಗಾನ ಸ್ಪರ್ಧೆಯನ್ನು ವೈಯಕ್ತಿಕವಾಗಿ ಅಳವಡಿಸಲಾಗಿದೆ ಎಂದ ಅವರು, ವಿಜೇತರಿಗೆ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳನ್ನು ಬಹುಮಾನ ರೂಪವಾಗಿ ಹಾಗೂ ನಗದನ್ನು ನೀಡಲಾಗುವುದು. ಸ್ಪರ್ಧೆಯು ಏಕ ಕಾಲದಲ್ಲಿ ಮೂರು ವೇದಿಕೆ ಹಾಗೂ 9 ಕೊಠಡಿಯಲ್ಲಿ ನಡೆಯಲಿದೆ ಎಂದು ವಿವರಿಸಿದರಲ್ಲದೆ ಕಳೆದ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ಎರಡು ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿತ್ತು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ರಾಧಾಕೃಷ್ಣ ಭಟ್, ಶಿಕ್ಷಣ ಸಂಯೋಜಕಿ ಸುಜಾತ ಆರ್. ಶೆಟ್ಟಿ ಉಪಸ್ಥಿತರಿದ್ದರು.







