ಬಿಜೆಪಿಯ ಗೋರಕ್ಷಣೆಯಿಂದ ದಲಿತರು ನಿರುದ್ಯೋಗಿಗಳು: ಐವನ್ ಡಿಸೋಜಾ

ಮಂಗಳೂರು, ಆ.25: ದೇಶಾದ್ಯಂತ ಇಂದು ಗೋರಕ್ಷಣೆ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮೇಲೆ ನಿರಂತರ ಹಲ್ಲೆ, ಆಕ್ರಮಣ ತೀವ್ರಗೊಂಡಿರುವಂತೆಯೇ, ಚರ್ಮೋದ್ಯಮ ಸ್ಥಗಿತಗೊಳ್ಳುವ ಸ್ಥಿತಿಗೆ ತಲುಪಿ ದೇಶದಲ್ಲಿ ದಲಿತ ಸಮುದಾಯದ ಒಂದು ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಚರ್ಮೋದ್ಯಮಕ್ಕೆ ಸಂಬಂಧಿಸಿದ 400 ತರಬೇತಿ ಘಟಕಗಳು ಮುಚ್ಚಲ್ಪಟ್ಟಿವೆ. ಗೋ ಪ್ರತಿಬಂಧಕ ಕಾಯ್ದೆ ತಂದ ಮೇಲೆ ಮಹಾರಾಷ್ಟ್ರದಲ್ಲಿ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದವರು ಹೇಳಿದರು.
ಬೀಫ್ ರಫ್ತು ಕಂಪನಿಗಳಿಗೆ ಬಿಜೆಪಿ ಸರಕಾರ ಇರುವ ಗುಜರಾತ್‌ನಲ್ಲಿ ಪರವಾನಿಗೆ ನೀಡಲಾಗುತ್ತದೆ. ಕಾನೂನು ಪ್ರಕಾರ ಯಾವುದೇ ಹೊಟೇಲುಗಳಲ್ಲಿ ತಿನ್ನಲು ಬಿಜೆಪಿ ಸರಕಾರವಿರುವ ಗೋವಾದಲ್ಲಿ ಅವಕಾಶವಿದೆ. ಈಶಾನ್ಯ ರಾಷ್ಟ್ರಗಳಲ್ಲೂ ಬೀಫ್ ತಿನ್ನಲು ಯಾರದೇ ಅಡ್ಡಿಯಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಚರ್ಮೋದ್ಯಮವೂ ಒಂದಾಗಿದ್ದರೂ ಇದಕ್ಕೆ ಬೇಕಾದ ಕಚ್ಚಾ ವಸ್ತುವಿನ ಕೊರತೆಯಿಂದ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಉದ್ಯೋಗವಿಲ್ಲದಂತಾಗಿದೆ. ಇದೇ ಅವಧಿಯಲ್ಲಿ ಗೋಮಾಂಸ ರಫ್ತು ಮಾತ್ರ ಹೆಚ್ಚಳವಾಗಿದೆ. ಇದರಿಂದ ದೇಶಕ್ಕೆ 4.8 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ದೊರೆಯುತ್ತಿದೆ. ರೈತರು ಗೋರಕ್ಷಕರ ಹಾವಳಿಯಿಂದ ದೇಶಿ ತಳಿಗಳನ್ನು ಸಾಕುವುದನ್ನು ಬಿಟ್ಟಿರುವುದರಿಂದ ಶೇ. 93ರಷ್ಟಿದ್ದ ದೇಶಿಯ ತಳಿ ಶೇ. 79ಕ್ಕೆ ಇಳಿಕೆಯಾಗಿದೆ. ಎಮ್ಮೆ ಕ್ರಾಸ್ ಬ್ರೀಡ್ ತಳಿ ಶೇ. 7ರಿಂದ ಶೇ. 21ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಪೂನಾ ಜಿಲ್ಲೆಯಲ್ಲಿ ಪೊಲೀಸರು ಮತ್ತು ಗೋರಕ್ಷಕರು 25,000 ಗೋವುಗಳನ್ನು ವಶಪಡಿಸಿಕೊಂಡು ಗೋ ಶಾಲೆಗೆ ಕಳುಹಿಸಿದ್ದರು. ಕೆಲ ತಿಂಗಳ ಹಿಂದೆ ಅವುಗಳ ಪರಿಶೀಲನೆ ನಡೆಸಿದಾಗ ಅಲ್ಲಿ 500ರಷ್ಟು ಗೋವುಗಳು ಮಾತ್ರ ಇದ್ದವು ಎಂದವರು ಹೇಳಿದರು.
ಕೆಂಜೂರು ಪ್ರಕರಣ ದೇಶ ತಲೆತಗ್ಗಿಸುವಂತೆ ಮಾಡಿದೆ
ಕೆಂಜೂರು ಪ್ರವೀಣ್ ಹತ್ಯೆ ಪ್ರಕರಣ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ.ಅವರ ಮನೆಯ ಪರಿಸ್ಥಿತಿ ಕರುಣಾಜನಕವಾಗಿದೆ. ಆದರೆ, ದೇವರು, ಧರ್ಮ, ಗೋವುಗಳ ಹೆಸರಿನಲ್ಲಿ ಬೆಂಕಿ ಹಚ್ಚಿ ಶೂದ್ರ ಯುವಕರ ತಲೆ ಕೆಡಿಸಿ ದಾರಿ ತಪ್ಪಿಸಿ, ಅಮಾಯಕ ಪ್ರಾಣಗಳ ಜತೆ ಆಟವಾಡಿ ತಮ್ಮ ರಾಜಕೀಯ ತೆವಲುಗಳನ್ನು ತೀರಿಸಿಕೊಳ್ಳುತ್ತಿರುವ ನಾಯಕರು ಸುಮ್ಮನೆ ಕುಳಿತಿದ್ದಾರೆ ಎಂದು ಐವನ್ ಡಿೋಜಾ ಆಕ್ರೋಶ ವ್ಯಕ್ತಪಡಿಸಿದರು.
ದೇಶ ಪ್ರೇಮದ ಬಗ್ಗೆ ಮಾತನಾಡುವವರು, ದೇಶದ ಪ್ರಧಾನಿಯೊಬ್ಬರು ಶಿಷ್ಟಾಚಾರವನ್ನು ಉಲ್ಲಂಘಿಸಿ ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ಪ್ರಶ್ನಿಸುವುದಿಲ್ಲ. ಜಮ್ಮುಕಾಶ್ಮೀರದಲ್ಲಿ ಪ್ರತ್ಯೇಕವಾದವನ್ನು ಬೆಂಬಲಿಸುವರ ಜತೆ ಸರಕಾರ ರಚಿಸಿರುವ ಬಗ್ಗೆ ಮಾತೆತ್ತುವುದಿಲ್ಲ. ಇದು ನಕಲಿ ದೇಶ ಪ್ರೇಮವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ರಮ್ಯಾ ಮಂಗಳೂರಿನ ಬಗ್ಗೆ ನೀಡಿರುವ ಪ್ರತಿಕ್ರಿಯೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ, ಆಹಾರ ಸೇವನೆ ವಿಚಾರದಲ್ಲಿ ಕೊಲ್ಲುವುದು ನರಕವಲ್ಲವೇ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.







