ಬೆಳ್ತಂಗಡಿ:5001ನೇ ಪ್ರಗತಿಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ

ಬೆಳ್ತಂಗಡಿ: ನಮ್ಮ ಕುಟುಂಬ ಏಳಿಗೆ ಆಗಬೇಕು ಎಂಬುವುದು ಎಲ್ಲರ ಕನಸು. ಮಹಿಳೆಯರು ಉಳಿತಾಯದ ಕಡೆ ಹೆಚ್ಚಿನ ಮಹತ್ವ ನೀಡಬೇಕು. ನಮ್ಮಲ್ಲಿ ವಿಶ್ವಾಸವಿದ್ದರೆ ಏಳ್ಗೆ ತಾನಾಗಿಯೇ ಬರುತ್ತದೆ ಎಂದು ರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಕೋಟನೂರ(ಡಿ) ಸಿದ್ಧಶ್ರೀ ಡಿವೈನ್ ಪ್ಯಾಲೇಸಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಾರ್ಪೋರೇಶನ್ ಬ್ಯಾಂಕ್ ಬೆಳಗಾವಿ ವಲಯದ ಸಹಕಾರದಲ್ಲಿಂದು 5001ನೇ ಪ್ರಗತಿಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ವಿವಿಧ ಅನುದಾನಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾವು ಯಾವುದೇ ಹಣಕಾಸಿನ ನೆರವು ಪಡೆದುಕೊಂಡರೆ ಅದು ಯಾವುದಾಕ್ಕಾಗಿ ಪಡೆದುಕೊಂಡಿದ್ದೇವೆ ಅದಕ್ಕೆ ಮಾತ್ರ ವಿನಿಯೋಗಿಸಬೇಕು. ನಮ್ಮ ಸಹಾಯ ನಾವೇ ಮಾಡಿಕೊಳ್ಳಬೇಕು. ಉಳಿತಾಯದ ಕಡೆ ಮಹಿಳೆಯರು ಹೆಚ್ಚಿನ ಗಮನ ನೀಡಿದರೆ, ಆಪತ್ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದರು.
43 ವರ್ಷಗಳ ಹಿಂದೆ ನಾನು ಕಲಬುರಗಿಗೆ ಬಂದಿದ್ದೆ .ಬೀದರ ಹಾಗೂ ಕಲಬುರಗಿಯಲ್ಲಿ ಭೀಕರ ಬರಗಾಲವಿತ್ತು, ಇಡೀ ದೇಶ ಈ ಭಾಗದ ಕಡೆ ನೋಡುತ್ತಿತ್ತು.1 0 ದಿನಗಳ ಕಾಲ ನಾನು ಇಲ್ಲಿ ಉಳಿದ ಬರಗಾಲ ಪರಿಸ್ಥಿತಿ ಕಣ್ಣಾರೆ ಕಂಡಿದ್ದೇನೆ. 10 ವರ್ಷಗಳ ನಂತರ ಜನರಿಗೆ ಸಹಾಯವಾಗುವಂತ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆರಂಭಿಸಲಾಯಿತು. ಅಂದು ನಾವು ಸಂಸ್ಥೆ ಬುತ್ತಿಕಟ್ಟಿಕೊಳ್ಳುವದಕ್ಕಾಗಿ ಆರಂಭಿಸಲಿಲ್ಲ. ಬುತ್ತಿಯನ್ನು ಕಟ್ಟುವದು ಹೇಗೆ ಎಂದು ಹೇಳಿಕೊಟ್ಟೇವು. ಅದಕ್ಕಾಗಿ ಇಂದು ಸಂಸ್ಥೆಯಲ್ಲಿ 20 ಸಾವಿರ ಜನರು ದುಡಿಯುತ್ತಿದ್ದಾರೆ. 35 ಲಕ್ಷಕ್ಕೂ ಅಧಿಕ ಸದಸ್ಯರು ಇದ್ದಾರೆ ಎಂದರು.
ಮುಗಳಖೋಡ ಜಿಡಗಾ ಮಠದ ಶಿವಯೋಗಿ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಂಸದ ಬಸವರಾಜ ಪಾಟೀಲ ಸೇಡಂ, ದಕ್ಷಿಣ ಮತ ಕ್ಷೇತ್ರ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಾಜಿ ಶಾಸಕ ಅಲ್ಲಮ ಪ್ರಭು ಪಾಟೀಲ, ಜಿಪಂ ಅಧ್ಯಕ್ಷೆ ಸುವರ್ಣಾ ಹೆಚ್. ಮಾಲಾಜಿ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಲ್. ಹೆಚ್. ಮಂಜುನಾಥ, ಕಾರ್ಪೋರೇಷನ್ ಬ್ಯಾಂಕ್ ಸಿಇಓ ಜೈಕುಮಾರ ಗರ್ಗ್, ಸಿಇಓ ಮಂಜುನಾಥ, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ದುಗ್ಗೆ ಗೌಡ, ಜಿ.ಆರ್. ಮದನ್, ಸಿದ್ದಲಿಂಗ ಸೇರಿದಂತೆ ಸ್ವಸಹಾಯ ಸಂಘದ ಸಾವಿರಾರು ಮಹಿಳೆಯರು ಉಪಸ್ಥಿತರಿದ್ದರು.







