ಪ್ರಶ್ನೆಗಳಿಂದ ಕೆರಳಿ ಸುದ್ದಿಗೋಷ್ಠಿಯನ್ನೇ ದಿಢೀರ್‌ನೆ ಅಂತ್ಯಗೊಳಿಸಿದ ಮೆಹಬೂಬ

ಶ್ರೀನಗರ,ಆ.25: ಗುರುವಾರ ಇಲ್ಲಿಯ ತನ್ನ ನಿವಾಸದಲ್ಲಿ ಕರೆಯಲಾಗಿದ್ದ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯ ಒಂದು ಹಂತದಲ್ಲಿ ಸುದ್ದಿಗಾರರ ಪ್ರಶ್ನೆಗಳಿಂದ ಸಹನೆ ಕಳೆದುಕೊಂಡ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಅವಸರವಸರವಾಗಿ ಸುದ್ದಿಗೋಷ್ಠಿಗೆ ಇತಿಶ್ರೀ ಹಾಡಿ ಹೊರನಡೆದರು. ರಾಜ್ಯದಲ್ಲಿ ಹಾಲಿ ತಾಂಡವವಾಡುತ್ತಿರುವ ಅಶಾಂತಿಯನ್ನು ನಿರ್ವಹಿಸುವಲ್ಲಿ ಅವರ ಪಾತ್ರದ ಕುರಿತು ಸುದ್ದಿಗಾರರು ಪ್ರಶ್ನೆಗಳನ್ನೆಸೆದಿದ್ದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೆಹಬೂಬ ದಿಢೀರನೆ ಎದ್ದು ‘ಥ್ಯಾಂಕ್ಯೂ ’ ಎಂದು ಹೇಳಿದರು. ಇನ್ನೂ ಕುಳಿತೇ ಇದ್ದ ಸಿಂಗ್ ಒಂದು ಕ್ಷಣ ಗೊಂದಲಕ್ಕೊಳಗಾಗಿ ಬಳಿಕ ತಾನೂ ಆಸನವನ್ನು ಬಿಟ್ಟೆದ್ದರು. ಅಲ್ಲಿಗೆ ಸುದ್ದಿಗೋಷ್ಠಿ ಅಂತ್ಯ ಕಂಡಿತು.
ಕಾಶ್ಮೀರದಲ್ಲಿ ಕಳೆದ 47 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕಲ್ಲು ತೂರಾಟ ಮತ್ತು ಹಿಂಸಾಚಾರದ ಕುರಿತು ಮುಫ್ತಿ ಮಾತನಾಡುತ್ತಿದ್ದಾಗ ಸುದ್ದಿಗಾರರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅವರ ಪಾತ್ರದ ಕುರಿತು ಪ್ರಶ್ನಿಸುತ್ತಲೇ ಇದ್ದರು.
‘ಮೆಹಬೂಬಜಿ ನಿಮ್ಮವರೇ ಆಗಿದ್ದಾರೆ ’ಎಂದು ಹೇಳುವ ಮೂಲಕ ಸಿಂಗ್ ಸುದ್ದಿಗಾರರನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದರು. ಹಾಗೆಯೇ ಮುಫ್ತಿಯವರನ್ನೂ ಸಮಾಧಾನಿಸಲು ಯತ್ನಿಸಿದ್ದರು. ಆದರೆ ತೀರ ಕೆರಳಿದ್ದ ಮುಫ್ತಿ ಅಲ್ಲಿಗೇ ಸುದ್ದಿಗೋಷ್ಠಿಗೆ ತೆರೆ ಎಳೆದರು.







