ನನ್ನ ಮಗನ ಹಂತಕರು ಆತ ದಲಿತನಲ್ಲ ಎಂದು ಸಾಧಿಸಲು ಯತ್ನಿಸುತ್ತಿದ್ದಾರೆ: ರಾಧಿಕಾ ವೇಮುಲಾ

ಹೊಸದಿಲ್ಲಿ,ಆ.25: ತನ್ನ ಪುತ್ರ ರೋಹಿತ ವೇಮುಲಾನನ್ನು ದಲಿತನಲ್ಲ ಎಂದು ಬಿಂಬಿಸಲು ನಡೆಯುತ್ತಿರುವ ಪ್ರಯತ್ನವು ಆತನ ಸಾವಿಗೆ ಕಾರಣರಾದವರನ್ನು ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧದ ಕಠೋರ ಕಾನೂನಿನ ಹಿಡಿತದಿಂದ ರಕ್ಷಿಸುವ ಮತ್ತು ಜಾತಿ-ವಿರೋಧಿ ಚಳವಳಿಯನ್ನು ದುರ್ಬಲಗೊಳಿಸುವ ರಾಜಕೀಯ ಒಳಸಂಚಾಗಿದೆ ಎಂದು ರಾಧಿಕಾ ವೇಮುಲಾ ಅವರು ಗುರುವಾರ ಇಲ್ಲಿ ಹೇಳಿದರು. ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ಸಾವಿಗೆ ಸಂಬಂಧಿಸಿದಂತೆ ಸರಕಾರವು ನೇಮಕಗೊಳಿಸಿದ್ದ ಏಕಸದಸ್ಯ ಆಯೋಗವು ಬುಧವಾರ ತನ್ನ ವರದಿಯನ್ನು ಸಲ್ಲಿಸಿದ್ದು,ಅದು ವಿವಿಯ ಕುಲಪತಿ ಅಪ್ಪಾ ರಾವ್ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದೆ ಮತ್ತು ರೋಹಿತ ದಲಿತನಾಗಿರಲಿಲ್ಲ ಎಂದು ಹೇಳಿದೆ ಎಂದು ವರದಿಗಳು ತಿಳಿಸಿವೆ.
ರೋಹಿತ್ ದಲಿತನಾಗಿರಲಿಲ್ಲ ಎಂಬ ಆಯೋಗದ ತೀರ್ಮಾನವು ಆತ ಆಂಧ್ರಪ್ರದೇಶದ ಮಾಲಾ ಪರಿಶಿಷ್ಟ ಜಾತಿಗೆ ಸೇರಿದ್ದ ಎಂದು ಘೋಷಿಸಿದ್ದ ಗುಂಟೂರು ಜಿಲ್ಲಾಧಿಕಾರಿಗಳ ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ(ಎನ್‌ಸಿಎಸ್‌ಸಿ)ದ ವರದಿಗಳಿಗೆ ವ್ಯತಿರಿಕ್ತವಾಗಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ವಿವಿ ಕ್ಯಾಂಪಸ್‌ನಲ್ಲಿ ನಿರಂತರ ತಾರತಮ್ಯದಿಂದಾಗಿ ಬೇಸತ್ತ ರೋಹಿತ್ ಕಳೆದ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವು ಜಾತಿ ಆಧಾರಿತ ತಾರತಮ್ಯದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ಹುಟ್ಟುಹಾಕಿತ್ತು.
ಇಲ್ಲಿಯ ಜೆಎನ್‌ಯು ವಿವಿಯ ಕ್ಯಾಂಪಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಧಿಕಾ,ರಾಷ್ಟ್ರವ್ಯಾಪಿ ಆಂದೋಲನ ನಡೆದಿದ್ದರೂ ತನ್ನ ಮಗನಿಗೆ ನ್ಯಾಯವೊದಗಿಸಲು ಸರಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ನೋವನ್ನು ವ್ಯಕ್ತಪಡಿಸಿದರು.
ತನ್ನ ಮಗನ ಹಂತಕರು ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ. ಆತ ದಲಿತನಲ್ಲವೆಂದು ಸಾಬೀತಾದರೆ ತಾವು ದಲಿತ ದೌರ್ಜನ್ಯ ಕಾನೂನಿನ ಹಿಡಿತದಿಂದ ಪಾರಾಗುತ್ತೇವೆ ಎಂದು ಅವರು ಭಾವಿಸಿದ್ದಾರೆ. ಆತ ಒಬಿಸಿ ವರ್ಗಕ್ಕೆ ಸೇರಿದ್ದ ಎನ್ನುವುದು ರುಜುವಾತಾದರೆ ರೋಹಿತ್ ಆಂದೋಲನವನ್ನು ಬೆಂಬಲಿಸಿದ್ದ ದಲಿತರು ದೂರ ಸರಿಯುತ್ತಾರೆ ಎಂದು ಅವರು ಲೆಕ್ಕ ಹಾಕಿದ್ದಾರೆ. ಆದರೆ ರೋಹಿತ್‌ನನ್ನು ಹೊತ್ತು ಹೆತ್ತು ಬೆಳೆಸಿದ್ದು ತಾನು. ತಾನು ದಲಿತಳಾಗಿದ್ದೇನೆ, ತನ್ನ ಮಕ್ಕಳು ದಲಿತ ಬದುಕನ್ನು ಬಾಳಿದ್ದಾರೆ ಮತ್ತು ತಾನು ದಲಿತಳಾಗಿಯೇ ಸಾಯುತ್ತೇನೆ. ಮಕ್ಕಳು ಒಬಿಸಿ ವರ್ಗಕ್ಕೆ ಸೇರಿದ ತಮ್ಮ ತಂದೆಯಲ್ಲಿಗೆ ಹೋಗುತ್ತಿದ್ದರು.ಆದರೆ ಆ ಮನುಷ್ಯ ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಅವರಿಗೆಂದೂ ನೆರವಾಗಿರಲಿಲ್ಲ ಎಂದು ಅವರು ಹೇಳಿದರು.
ರೋಹಿತ್ ಒಬಿಸಿಗೆ ಸೇರಿದವನು ಎಂದು ಬಿಂಬಿಸಿಬಿಟ್ಟರೆ ಆಂದೋಲನವು ಸತ್ತು ಹೋಗುತ್ತದೆಂದು ಸಂಚುಕೋರರು ಭಾವಿಸುತ್ತಿದ್ದಾರೆಯೇ? ಹೋರಾಟವನ್ನು ಬೆಂಬಲಿಸಲು ಒಬಿಸಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಾರೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸರಕಾರದಲ್ಲಿ ತನಗೆ ವಿಶ್ವಾಸವಿಲ್ಲ. ಮೋದಿ ಏನಾದರೂ ಮಾಡಿಯಾರು ಎಂದು ತಾನು ಭಾವಿಸಿಲ್ಲ. ಈ ದೇಶದಲ್ಲಿ ದಲಿತರಿಗಿಂತ ಗೋವುಗಳಿಗೇ ಹೆಚ್ಚಿನ ಗೌರವ ದೊರೆಯುತ್ತದೆ. ಆದರೆ ದಲಿತರ ಬಳಿ ಮತಗಳಿವೆ ಮತ್ತು ಅದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ. ದಲಿತರು-ಬಹುಜನರು ಭವಿಷ್ಯವನ್ನು ನಿರ್ಧರಿಸುತ್ತಾರೆ. ಈ ದೇಶವು ಎಲ್ಲರಿಗಾಗಿ ಇದೆ,ಕೇವಲ ಮೇಲ್ಜಾತಿಗಳಿಗಲ್ಲ ಎಂದರು.
ಈ ಸರಕಾರದ ಅವಧಿಯಲ್ಲಿ ತನಗೆ ನ್ಯಾಯ ದೊರಕದಿರಬಹುದು, ಆದರೆ ಸುದೀರ್ಘ ಹೋರಾಟದ ಬಳಿಕ ಅದು ಸಿಕ್ಕೇ ಸಿಕ್ಕಲಿದೆ ಎಂದು ತನ್ನ ಒಳಮನಸ್ಸು ಹೇಳುತ್ತಿದೆ. ಇಂತಹ ಸಾಂಸ್ಥಿಕ ಕೊಲೆಗಳು ಇನ್ನಷ್ಟು ನಡೆಯಬಾರದು ಎಂದೇ ತಾನು ಹೋರಾಟವನ್ನು ಆರಂಭಿಸಿದ್ದೇನೆ. ಇದು ಅಂತ್ಯಗೊಳ್ಳಲೇಬೇಕು.ತನ್ನ ಪಾಡನ್ನು ಯಾವ ತಾಯಿಯೂ ಅನುಭವಿಸಬಾರದು ಎಂದು ರಾಧಿಕಾ ಹೇಳಿದರು.







