ಉಡುಪಿಯಲ್ಲಿ ಶ್ರೀಕೃಷ್ಣ ಲೀಲೋತ್ಸವದ ಸಂಭ್ರಮ

ಉಡುಪಿ, ಆ.25: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇದೇ ಮೊದಲ ಬಾರಿಗೆ ಎರಡು ದಿನ ಕೃಷ್ಣ ಜನ್ಮದಿನದ ಸಂಭ್ರಮವನ್ನು ಆಚರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವಲ್ಲಿ ಅಷ್ಟಮಠಗಳಲ್ಲಿ ಇರುವ ಅಭಿಪ್ರಾಯ ಬೇಧ ಈ ಬಾರಿ ಎರಡು ದಿನ ಜನ್ಮಾಷ್ಟಮಿ ಆಚರಿಸುವಂತೆ ಮಾಡಿತು. ಇದೀಗ ನಾಳೆ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ.
ನಿನ್ನೆ ದಿನವಿಡೀ ಉಪವಾಸವಿದ್ದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ರಾತ್ರಿ ತುಳಸೀ ಅರ್ಚನೆ ನಡೆಸಿ ಮಹಾಪೂಜೆ ಮಾಡಿದ ಬಳಿಕ 11:48ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದ್ದರು. ಬಳಿಕ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀವಿಶ್ವನಂದನ ತೀರ್ಥ ಸ್ವಾಮೀಜಿ, ಶ್ರೀವಿಶ್ವಭೂಷಣ ತೀರ್ಥ ಸ್ವಾಮೀಜಿ ಹಾಗೂ ಕ್ಷತ್ರೀಯ ಪೀಠಾಧಿಪತಿ ಶ್ರೀವಿಶ್ವಧಿರಾಜ ತೀರ್ಥ ಸ್ವಾಮೀಜಿ ಅರ್ಘ್ಯ ಪ್ರದಾನ ಮಾಡಿದರು. ನಂತರದ ಸರದಿ ಸೇರಿದ ಭಕ್ತಸಮೂಹದಾಗಿತ್ತು.
ಅದೇ ರೀತಿ ಗುರುವಾರವೂ ನಿರ್ಜಲ ಉಪವಾಸ ಮಾಡಿ ಎಲ್ಲಾ ಪೂಜೆ ನೆರವೇರಿಸಿ ಇಂದು ರಾತ್ರಿ 11:48ಕ್ಕೆ ಮತ್ತೊಮ್ಮೆ ಅರ್ಘ್ಯ ಪ್ರದಾನ ಮಾಡಿದರು. ಆ ಬಳಿಕ ಮಠದಲ್ಲಿ ಸೇರಿದ್ದ ಜನಸಮೂಹ ಅರ್ಘ್ಯ ಪ್ರದಾನ ಮಾಡಿತು.
ಸ್ಪರ್ಧೆಗಳು, ವೇಷಗಳು: ಇಂದು ಮಠದಲ್ಲಿ ಮುದ್ದುಕೃಷ್ಣ, ಬಾಲಕೃಷ್ಣ ಸ್ಪರ್ಧೆಗಳು ನಡೆದವು. 400ಕ್ಕೂ ಅಧಿಕ ಮಕ್ಕಳು ವಿವಿಧ ಬಗೆಯಲ್ಲಿ ಕೃಷ್ಣನ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಉಡುಪಿಯ ಶ್ರೀಕೃಷ್ಣ ಮಠ ಪರಿಸರ ಹಾಗೂ ಬೀದಿ ಬೀದಿಗಳಲ್ಲಿ, ಬಸ್ಸು, ಕಾರುಗಳಲ್ಲಿ ಮುದ್ದು ಮುದ್ದಾದ ಮಕ್ಕಳು ವೈವಿಧ್ಯಮಯ ಕೃಷ್ಣನ ವೇಷದಲ್ಲಿ ಓಡಾಡುತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾದರೂ ನಗರದ ಅಲ್ಲಲ್ಲಿ ವಿವಿಧ ರೀತಿಯ ವೇಷಗಳು, ವಿಶೇಷವಾಗಿ ಹುಲಿ ವೇಷಗಳು ನಗರವಿಡೀ ಸುತ್ತಾಡುತ್ತಾ ಪ್ರದರ್ಶನ ನೀಡಿದವು. ಅವುಗಳಿಗೆ ಜನರ ಪ್ರೋತ್ಸಾಹ ಸಹ ತೀರಾ ಕಡಿಮೆ ಇತ್ತು.
ನಾಳೆ ಅಪರಾಹ್ಣ 3:30ರಿಂದ ರಥಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ಕೃಷ್ಣನ ಲೀಲೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು, ಚಿನ್ನದ ರಥದಲ್ಲಿ ಇರಿಸುವ ಕೃಷ್ಣನ ಮೃಣ್ಮಯ (ಮಣ್ಣಿನ ಮೂರ್ತಿ) ಮೆರವಣಿಯಲ್ಲಿ ಸಾಗಿ ಬರಲಿದೆ. ರಥಬೀದಿಯಲ್ಲಿ ವಿವಿಧ ಕಡೆಗಳಲ್ಲಿ ಹಾಕಲಾದ ಮಂಟಪಗಳಲ್ಲಿ ಶ್ರೀಮಠದ ಗೊಲ್ಲರು ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆ. ಈ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನ ಗೊಳಿಸುವುದರೊಂದಿಗೆ ಕೃಷ್ಣ ಲೀಲೋತ್ಸವಕ್ಕೆ ತೆರೆಬೀಳಲಿದೆ.
ಸಂಜೆ 4:00 ರಿಂದ ರಾಜಾಂಗಣದಲ್ಲಿ ವಿಟ್ಲಪಿಂಡಿ ಉತ್ಸವ ಪ್ರಯುಕ್ತ ವಿಶೇಷ ಹುಲಿವೇಷ ಸ್ಪರ್ಧೆ ಹಾಗೂ ಜಾನಪದ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವೇಷಧಾರಿಗಳಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ. ಶನಿವಾರ ರಾಜಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.







