ಬಿಜೆಪಿಯಿಂದ ಶಾಂತಿ ಕದಡಲು ಯತ್ನ : ಜಿಲ್ಲಾ ಕಾಂಗ್ರೆಸ್

ಮಂಗಳೂರು, ಆ. 26: ಇತ್ತೀಚೆಗೆ ಬೆಂಗಳೂರಿನಲ್ಲಿ ಅಮ್ನೇಷಿ ಇಂಟರ್‌ನ್ಯಾಷನಲ್ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ, ನಿಸ್ಪಕ್ಷಪಾತ ತನಿಖೆ ಕೈಗೊಂಡಿದ್ದರೂ ರಾಜಕೀಯ ಲಾಭಕೋಸ್ಕರ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರು ಸಾರ್ವಜನಿಕ ಸ್ಥಳಗಳಲ್ಲಿ ದಾಂಧಲೆ ನಡೆಸಿ ಶಾಂತಿ ಕಡದಲು ಯತ್ನಿಸುತ್ತಿರುವುದು ಖಂಡನೀಯ. ಕಾಲೇಜು ಮಕ್ಕಳನ್ನು ಬೀದಿಗಿಳಿಸುವ ಮೂಲಕ ಈ ಸಂಘಟನೆಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಎ.ಸಿ.ವಿನಯರಾಜ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಅಮ್ನೇಷಿ ಇಂಟರ್‌ನ್ಯಾಷನಲ್ ಸಂಸ್ಥೆಯು ದೇಶ ವಿರೋಧಿ ಕೆಲಸ ಮಾಡಿದ್ದರೆ ಅದನ್ನು ಬಹಿಷ್ಕರಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ. ಆದರೆ, ಸತ್ಯಾಂಶವನ್ನು ಮರೆಮಾಚಿ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಕೆಡಿಸಲು ಪ್ರಯತ್ನಿಸುವ ಮೂಲಕ ಬಿಜೆಪಿ ಮತ್ತು ಎಬಿವಿಪಿ ನಾಯಕರು ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರದ ಯಾವುದೇ ನಾಯಕರು ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರುವುದಾಗಲೀ ಅಥವಾ ಬಲಿದಾನ ಮಾಡಿದ ಉದಾಹರಣೆಗಳು ಇಲ್ಲ. ಈ ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕ ಬರೇ ಅಧಿಕಾರಕ್ಕಾಗಿ ಹೋರಾಟ ಮಾಡಿದ್ದೇ ಬಿಜೆಪಿಯ ಕೊಡುಗೆ ಎಂದು ವಿನಯರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಸಂಘ ಪರಿವಾರ ಮತ್ತು ಬಿಜೆಪಿ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಮಾತನಾಡಿದ ವಿದ್ಯಾರ್ಥಿಗಳು, ಚಿಂತಕರು, ಸಾಹಿತಿಗಳು ಮತ್ತು ರಾಜಕಾರಣಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದರ ಮೂಲಕ ಅಭಿವ್ಯಕ್ತ ಸ್ವಾತಂತ್ರದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದ ಜನರ ಮೇಲೆ ದಬ್ಬಾಳಿಕೆ ಹಾಗೂ ಕೊಲೆಯಂತಹ ಹೀನ ಕೃತ್ಯಕ್ಕೆ ಕೈ ಹಾಕುವ ಕೆಲವು ಸಂಘಟನೆಗಳು ಸಾಮಾಜಿಕ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವುದು ದೇಶದ ದುರಂತ. ಸ್ವತಃ ಪ್ರಧಾನಮಂತ್ರಿಯವರೇ ‘ಗೋರಕ್ಷಣೆ ಹೆಸರಿನಲ್ಲಿ ಕ್ರಿಮಿನಲ್‌ಗಳು ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂಬ ಹೇಳಿಕೆ ನೀಡಿರುವುದು ಸಂಘ ಪರಿವಾರದ ವಿರುದ್ಧ ಸರಿಯಾಗಿಯೇ ಹೇಳಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







