ಕೊಣಾಜೆ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆಚರಣೆಗಳು ಸೌಹಾರ್ದತೆ ಮೂಡಿಸುತ್ತದೆ: ರವೀಂದ್ರ ರೈ

ಕೊಣಾಜೆ,ಆ.25: ಅದೆಷ್ಟೋ ಧಾರ್ಮಿಕ ಆಚರಣೆಗಳನ್ನು ನಾವು ಆಚರಿಸುತ್ತಾ ಬರುತ್ತಿದ್ದು ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರದೆ ಸಮಾಜದ ಸೌಹಾರ್ದತೆಗೆ ಸಹಕಾರಿಯಾಗಬೇಕು ಎಂದು ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಂರಾದ ರವೀಂದ್ರ ರೈ ಹರೇಕಳ ಹೇಳಿದರು.
ಅವರು ಕೊಣಾಜೆಯ ಮಂಗಳ ಗ್ರಾಮೀಣ ಯುವಕ ಸಂಘ, ನಾಗಬ್ರಹ್ಮ ಪ್ರಗತಿಪರ ಸ್ವಹಾಯ ಸಂಘ ಕೊಣಾಜೆ ಹಾಘೂ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ ಕೊಣಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಕೊಣಾಜೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಬುಧವಾರ ನಡೆದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜಸೇವಕಿ ವಿಜಯಲಕ್ಷ್ಮೀ ಪ್ರಸಾದ್ ರೈ ಕಲ್ಲಿಮಾರ್ ದಂಪತಿಗಳು ಕೃಷ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಕಿರಣ್‌ರಾಜ್ ಗಟ್ಟಿ ಕೆಳಗಿನ ಮನೆ, ಮಾಸ್ಟರ್ ನಿಶಾಂತ್ ಗಟ್ಟಿ ಕಲ್ಕಾರ್, ಮಲ್ಲಿಕಾ ಅಣ್ಣೆರೆಪಾಲ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ಶಿಕ್ಷಕಿ ಪ್ರೆಸ್ಸಿ ಕುವೆಲ್ಲೋ, ಗ್ರಾಮಕರಣಿಕ ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಪ್ರೊ.ಸರೋಜಿನಿ, ತಾ.ಪಂ.ಸದಸ್ಯರಾದ ಪದ್ಮಾವತಿ, ಪರಿಸರ ಪ್ರೇಮಿ ಹಸನಬ್ಬ, ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾದ ಭವ್ಯ, ಪಂಚಾಯತಿ ಸದಸ್ಯೆ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಮಾಜಿ ಸದಸ್ಯರಾದ ಹಸನ್ ಕುಂಞಿ, ಮಂಗಳೂರು ವಿವಿಯ ಡಾ.ಶೇಖರ್, ಹರೀಶ್ ಆಚಾರ್ಯ, ಅಕ್ಷಯ, ಅಶ್ವಿನಿ ಗಟ್ಟಿ, ಪ್ರಕಾಶ್, ಸುರಕ್ಷಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಅಧ್ಯಕ್ಷರಾದ ಅಚ್ಯುತಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷರಾದ ಎ.ಕೆ.ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಪೂರ್ಣಿಮ ಶೆಟ್ಟಿ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.





