ಭೀಕರ ಭೂಕಂಪಕ್ಕೆ ಇಟೆಲಿ ತತ್ತರ: 247 ಬಲಿ, ಸಮರೋಪಾದಿ ರಕ್ಷಣಾ ಕಾರ್ಯ

ಅಕ್ಯುಮೊಲಿ (ಇಟೆಲಿ): ಕೇಂದ್ರ ಇಟೆಲಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 247 ಮಂದಿ ಮೃತಪಟ್ಟಿದ್ದಾರೆ. ಧ್ವಂಸವಾಗಿರುವ ಹಳ್ಳಿಗಳಲ್ಲಿ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವವರನ್ನು ರಕ್ಷಿಸಲು ಸಮರೋಪಾದಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ನಡೆದ ದುರ್ಘಟನೆಯಲ್ಲಿ ಧ್ವಂಸಗೊಂಡ ಕಟ್ಟಡಗಳಡಿ ಎಷ್ಟು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ಹೇಳಿವೆ. ಪರಿಹಾರ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ತುರ್ತು ಸೇವಾ ಪಡೆ ಸಿಬ್ಬಮದಿ ತೊಡಗಿಸಿಕೊಂಡಿದ್ದಾರೆ. ಮನೆಗಳಡಿ ಸಿಕ್ಕಿಹಾಕಿಕೊಂಡಿದ್ದು, ಜೀವಂತ ಇರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಭೀಕರ ವಿಕೋಪಕ್ಕೆ ತುತ್ತಾದ ಗ್ರಾಮ ಅಮಟ್ರೈಸ್‌ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮಟ್ಟೆಓ ರೆಂಝಿಲ್, ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮತ್ತೆ ಭೂಕಂಪ ಮರುಕಳಿಸುವ ಭೀತಿಯ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ನಡುಗುವ ಚಳಿಯಲ್ಲೇ ಡೇರೆಗಳಲ್ಲಿ ರಾತ್ರಿ ಕಳೆದರು. ರಿಕ್ಟರ್ ಮಾಪಕದಲ್ಲಿ 6 ರಿಂದ 6.2ರಷ್ಟು ತೀವ್ರತೆ ಹೊಂದಿದ್ದ ಭೂಕಂಪವು ಸಾವಿರಾರು ಮನೆಗಳನ್ನು ನೆಲಸಮ ಮಾಡಿದೆ.





