ಗಣೇಶೋತ್ಸವ, ಕೃಷ್ಣಜನ್ಮಾಷ್ಟಮಿ, ಬಕ್ರೀದ್ ಹಬ್ಬಕ್ಕೆ ಶಾಂತಿ ಸಭೆ
ಸ್ವಯಂ ಸೇವಕರ ಪಟ್ಟಿಯನ್ನು ಠಾಣೆಗೆ ಕೊಡಿ - ಮಹೇಶ್ ಪ್ರಸಾದ್

ಪುತ್ತೂರು,ಆ.25: ಸಾರ್ವಜನಿಕ ಗಣೇಶೋತ್ಸವ, ಶ್ರೀಕೃಷ್ಣಜನ್ಮಾಷ್ಟಮಿ, ಬಕ್ರೀದ್ ಹಬ್ಬಗಳ ಕಾರ್ಯಕ್ರಮಗಳಲ್ಲಿ ಸಂಘಟನೆಯ ಮೂಲಕ ನೇಮಿಸಲ್ಪಡುವ ಸಾಕಷ್ಟು ಸ್ವಯಂ ಸೇವಕರ ಗುರುತು ಪರಿಚಯದ ಪಟ್ಟಿಯನ್ನು ಪೊಲೀಸ್ ಠಾಣೆಗೆ ನೀಡಬೇಕೆಂದು ಪುತ್ತೂರು ನಗರ ಠಾಣೆ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಹೇಳಿದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಬಕ್ರೀದ್ ಹಬ್ಬದ ಕುರಿತು ಪುತ್ತೂರು ನಗರ ಸಂಚಾರ ಠಾಣೆಯಲ್ಲಿ ಗುರುವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿ 15 ಕಡೆ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುತ್ತಿದೆ. ಕಿಲ್ಲೆ ಮೈದಾನ, ಮಹಾಲಿಂಗೇಶ್ವರ ವಠಾರ, ಪುರುಷರಕಟ್ಟೆಯಲ್ಲಿ ನಡೆಸುವ ದೊಡ್ಡ ಮಟ್ಟದ ಗಣೇಶೋತ್ಸವಗಳಲ್ಲಿ ಹೆಚ್ಚಿನ ನಿಗಾ ಇಡಬೇಕಾಗಿದೆ. ಸಂಘಟನೆಯ ವತಿಯಿಂದ ಕಾರ್ಯಕ್ರಮಗಳು, ಮೆರವಣಿಗೆಗಳು ನಡೆಯುತ್ತವೆ. ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವಂತೆ ಕಾರ್ಯಕ್ರಮದ ಸ್ಥಳಗಲ್ಲಿ ರಾತ್ರಿ ಪಾಲಯದಲ್ಲಿರುವ ಸ್ವಯಂಸೇವಕರು ಮತ್ತು ಮೆರವಣಿಗೆ ಸಂದರ್ಭದಲ್ಲಿರುವ ಕಾರ್ಯಕರ್ತ ಸ್ವಯಂ ಸೇವಕರನ್ನು ಗುರುತಿಸುವ ನಿಟ್ಟಿನಲ್ಲಿ ಅವರ ಪಟ್ಟಿಯನ್ನು ಪೊಲೀಸ್ ಠಾಣೆಗೆ ನೀಡಬೇಕು ಎಂದ ಅವರು ಕಳೆದ ವರ್ಷ ಕಾನೂನು ಸುವ್ಯವಸ್ಥೆ ಕಾಪಾಡಲು ತಾವೆಲ್ಲ ಬಹಳಷ್ಟು ಸಹಕಾರ ನೀಡಿರುವ ಹಿನ್ನೆಲೆಯಲ್ಲಿ ಈ ವರ್ಷ ಕೆಲವೊಂದು ಕಾರ್ಯಕ್ರಮದ ಕುರಿತು ಮುಜಾಗುರತೆಗಾಗಿ ಯಾರಿಗೂ ನೊಟೀಸ್ ಮಾಡಿಲ್ಲ ಎಂದರು. ಕಾರ್ಯಕ್ರಮದ ಪೂರ್ಣ ದಿನಗಳಲ್ಲಿ ನಮ್ಮ ಪೊಲೀಸರು ಗಸ್ತು ತಿರುಗುತ್ತಾರೆ. ಆದಷ್ಟು ತಮ್ಮ ಹೊಣೆಗಾರಿಕೆಯನ್ನು ನಿಮ್ಮ ಕಾರ್ಯಕ್ರಮದ ಸಂಘಟಕರು ಸ್ವಯಂ ಸೇವಕರ ಮೂಲಕ ನಿಯಂತ್ರಿಸಬೇಕು ಎಂದ ಅವರು ನಿಮ್ಮ ಸಹಕಾರ ರಕ್ಷನಾತ್ಮಕವಾಗಿರಲಿ ಎಂದು ಹೇಳಿದರು.
ಬೆಂಕಿ ಅನಾಹುತವಾಗದಂತೆ ಎಚ್ಚರ ವಹಿಸಿ:
ಕಾರ್ಯಕ್ರಮದ ಸಭೆ ನಡೆಯುವಲ್ಲಿ ಅಗ್ನಿ ದುರಂತ ನಡೆಯದಂತೆ ಮುಂಜಾಗುರತೆ ಕ್ರಮವಾಗಿ ಮೆಸ್ಕಾಂ ಇಲಾಖೆ ಮೂಲಕ ವೇದಿಕೆ ಮತ್ತು ಸುತ್ತಲಿನ ವಯರಿಂಗ್ ಪರಿಶೀಲನೆ ನಡೆಸಬೇಕು. ಲೀಗಲ್ ಕನೆಕ್ಷನ್ ತೆಗೆದು ಕೊಳ್ಳಿ. ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಹೊಯಿಗೆಯನ್ನು ಶೇಖರಣೆ ಮಾಡಿಕೊಳ್ಳಿ. ಮೆರವಣಿಗೆ ಸಂದರ್ಭದಲ್ಲಿ ಕೆಲವೊಂದು ಸ್ತಬ್ದ ಚಿತ್ರಗಳ ಗಾತ್ರ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ರಸ್ತೆಯ ಮಧ್ಯೆ ಹಾದು ಹೋದ ವಿದ್ಯುತ್ ತಂತಿಗಳನ್ನು ಕೊಕ್ಕೆ ಹಾಕಿ ತಪ್ಪಿಸುವ ಪ್ರಯತ್ನ ನಡೆಯುತ್ತದೆ. ಇದು ಬಹಳ ಅಪಾಯಕಾರಿ. ಈ ನಿಟ್ಟಿನಲ್ಲಿ ತಂತಿಗಳಿಗೆ ಕೊಕ್ಕೆ ಹಾಕುವುದು ನಿಷೇಧಿಸಬೇಕು. ಈ ಕುರಿತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿ ಎಂದು ಎಂದು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಹೇಳಿದರು.
ಬೈಕ್‌ರ್ಯಾಲಿ ನಿಲ್ಲಿಸಲು ಸಹಕಾರ ನೀಡಿದಕ್ಕೆ ಕೃತಜ್ಞತೆ:
ಬೈಕ್ ರ್ಯಾಲಿ ನಿಲ್ಲಿಸುವಂತೆ ನಮ್ಮ ಕೋರಿಕೆಯಂತೆ ತಮ್ಮಿಂದ ಪೂರ್ಣ ಸಹಕಾರ ಸಿಕ್ಕಿದೆ. ಇತ್ತಿಚೆಗೆ ತಿರಂಗ ಯಾತ್ರೆಯಲ್ಲೂ ಬೈಕ್ ರ್ಯಾಲಿ ಬದಲು ಕಾರು, ಜೀಪುಗಳನ್ನು ಬಳಸಿಕೊಂಡಿದ್ದರು. ಬದಲಾವಣೆ ಆಗಿದೆ. ಪುತ್ತೂರಿನಲ್ಲಿ ಬೈಕ್ ರ್ಯಾಲಿ ನಿಲ್ಲಿಸಲು ಸಹಕರಿಸಿದ್ದಕ್ಕೆ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಹೇಳಿದರು. ಸಂಚಾರ ಠಾಣೆ ಎಸ್.ಐ ನಾಗರಾಜ್ ಸ್ವಾಗತಿಸಿ, ನಗರ ಠಾಣೆ ಎಸ್.ಐ ವೆಂಕಟೇಶ್ ಭಟ್ ವಂದಿಸಿದರು. ಹೆಡ್ ಕಾನ್‌ಸ್ಟೇಬಲ್ ಜಯರಾಮ, ಕಾನ್‌ಸ್ಟೇಬಲ್ ಪ್ರಶಾಂತ್ ಶೆಟ್ಟಿ ಸಹಕರಿಸಿದರು. ಕಿಲ್ಲೆ ಮೈದಾನದ ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಸುದೇಶ್ ನಾಕ್, ದಿನೇಶ್ ಪಿ.ವಿ, ಫಿಲೋಮಿನಾ ಗಣೇಶೋತ್ಸವದ ಪ್ರಕಾಶ್, ಶೇಖರ್ ಪೂಜಾರಿ ಬೆಳ್ಳಿಪ್ಪಾಡಿ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಹಸನ್ ಹಾಜಿ ಯುನಿಟಿ, ಯಾಕೂಬ್ ದರ್ಬೆ, ಕೆ.ಅಹಮ್ಮದ್ ಕುಂಞಿ, ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದ ಕಾರ್ಯದರ್ಶಿ ಯು,ಪೂವಪ್ಪ, ಸೀತಾರಾಮ ಶೆಟ್ಟಿ, ನ್ಯಾಯವಾದಿ ಕುಮಾರನಾಥ್, ಬಿ.ಶಿವಶಂಕರ ಭಟ್, ಪಿ.ಈಶ್ವರ ಭಟ್, ಯು.ಮೊಹಮದ್ ಹಾಜಿ, ಕೊಡ್ನಿನೀರು ಗಣೇಶೋತ್ಸವದ ನಾರಾಯಣ್, ಪುತ್ತೂರು ಮೊಸರು ಕುಡಿಕೆ ಉತ್ಸವದ ಡೀಕಯ್ಯ ಪೆರ್ವೋಡಿ ಮತ್ತಿತರರು ಉಪಸ್ಥಿತರಿದ್ದರು.





