ಸರಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆಗೆ ಒತ್ತಾಯ

ಸೊರಬ, ಆ.25: ವಿಶ್ವಕರ್ಮ ಜಯಂತಿಯನ್ನು ಸೆ. 17ರಂದು ರಾಜ್ಯಾದ್ಯಂತ ಸರಕಾರದ ವತಿಯಿಂದ ಆಚರಿಸುವಂತೆ ಒತ್ತಾಯಿಸಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಾಜದ ಅಧ್ಯಕ್ಷ ಎನ್.ಷಣ್ಮುಖಾಚಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಿಶ್ವಕರ್ಮ ಸಮಾಜದವರಿದ್ದಾರೆ. ನಾಡಿನ ಕಲೆ ಸಂಸ್ಕೃತಿಗೆ ಅಡಿಪಾಯ ಹಾಕಿದವರಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅನನ್ಯವಾಗಿದೆ. ಹಿಂದುಳಿದ ಜನಾಂಗದವರಾದ ವಿಶ್ವಕರ್ಮರು ಅನೇಕ ಕ್ಷೇತ್ರಗಳಲ್ಲಿ ಪಂಚ ಕಸುಬುಗಳನ್ನು ಮಾಡಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಮಾಜದ ವತಿಯಿಂದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮ್ಮೇಳನ ನಡೆಸುತ್ತಾ ಬಂದಿದೆ. ಇತರೆ ಜಯಂತಿಗಳಂತೆ ವಿಶ್ವಕರ್ಮ ಜಯಂತಿಯನ್ನು ಸರಕಾರವೇ ಆಚರಿಸಬೇಕು ಎಂದು ಒತ್ತಾಯಿಸಿದರು. ಕಳೆದ ವರ್ಷ ನಡೆದ ರಾಜ್ಯ ಮಟ್ಟದ ವಿಶ್ವಕರ್ಮ ಜಯಂತಿಯಂದು ಸಿದ್ದರಾಮಯ್ಯ ಅವರು ಮುಂದಿನ ಬಾರಿ ಸರಕಾರದ ವತಿಯಿಂದಲೇ ವಿಶ್ವಕರ್ಮ ಜಯಂತಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಅಂತೆಯೇ ಸೆ. 17ರಂದು ಸರಕಾರದ ವತಿಯಿಂದ ಜಯಂತಿಯನ್ನು ಆಚರಿಸುವ ಬಗ್ಗೆ ಶೀಘ್ರ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದಭರ್ದಲ್ಲಿ ಸಮಾಜದ ಗೌರವಾಧ್ಯಕ್ಷ ಕೆ. ದತ್ತಾತ್ರೇಯ ಆಚಾರ್, ಗೌರವ ಸಲಹೆಗಾರ ಚನ್ನಯ್ಯ ಆಚಾರ್ ಜಡೆ, ಕೋಶಾಧ್ಯಕ್ಷ ಕೆ. ಶ್ರೀಧರ ಕಮ್ಮಾರ್, ಉಪಾಧ್ಯಕ್ಷ ಪರಮೇಶ್ವರ ಆಚಾರ್, ಎನ್.ಶಿವಾನಂದ ಆಚಾರ್, ಸಹಕಾರ್ಯದರ್ಶಿ ಬಸವರಾಜ್ ಬಡಿಗೇರ್, ನಿರ್ದೇಶಕರಾದ ರಮೇಶ್ ಆಚಾರ್, ಸಿದ್ದರಾಮೇಶ್ವರ ಆಚಾರ್, ಪ್ರಮುಖರಾದ ಪ್ರಕಾಶ್, ಕುಬೇರ ಆಚಾರ್, ದೇವಕಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.





