ಮಿತಿಮೀರುತ್ತಿರುವ ಭ್ರಷ್ಟಾಚಾರ: ನಾಗರಿಕರು ತತ್ತರ
ಲೋಕಾಯುಕ್ತ-ಎಸಿಬಿ ಗೊಂದಲ
ಶಿವಮೊಗ್ಗ, ಆ.25: ಭ್ರಷ್ಟಾಚಾರ ನಿಗ್ರಹಕ್ಕಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯ ಸರಕಾರವು ಪೊಲೀಸ್ ಇಲಾಖೆಯ ಅಧೀನದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.)ವನ್ನು ರಚಿಸಿದೆ. ಇದರಿಂದ ಇಷ್ಟು ದಿನ ಭ್ರಷ್ಟರ ನಿದ್ದೆಗೆಡುವಂತೆ ಮಾಡಿದ್ದ ಲೋಕಾಯುಕ್ತ ಸಂಸ್ಥೆ ನಿಸ್ತೇಜಗೊಳ್ಳುವಂತಾಗಿದೆ. ಇನ್ನೊಂದೆಡೆ ಲೋಕಾಯುಕ್ತ ಹಾಗೂ ಎಸಿಬಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿರುವ ಗೊಂದಲ ಮುಂದುವರಿದಿದೆ. ಇದರ ನೇರ ಪರಿಣಾಮ ಕೆಲ ಸರಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಯಾರ ಅಂಕೆಗೂ ಸಿಗದಂತೆ ಮೇರೆ ಮೀರಿ ಹೋಗುವಂತಾಗಿದೆ. ಲಂಚ-ಆಮಿಷವಿಲ್ಲದೆ ಯಾವುದೇ ಕೆಲಸವಾಗದಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಹೇಳುವವರು, ಕೇಳುವವರ್ಯಾರು ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ. ಈ ಹಿಂದೆ ಭ್ರಷ್ಟಾಚಾರ, ಲಂಚದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿತ್ತು. ಸರಕಾರಿ ನೌಕರರು ಮಾತ್ರವಲ್ಲದೆ ನಾನಾ ವರ್ಗದ ಜನಪ್ರತಿನಿಧಿಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆ ತನ್ನ ಬಲೆಗೆ ಬೀಳಿಸಿಕೊಳ್ಳುವ ಮೂಲಕ ರಾಜ್ಯ ಮಾತ್ರವಲ್ಲದೆ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಇದರಿಂದ ಸರಕಾರಿ ರಂಗ ಮಾತ್ರವಲ್ಲದೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಹಾವಳಿ ಕೊಂಚ ಕಡಿಮೆಯಿತ್ತು. ಆಡಳಿತಗಾರರ ಹಿಡಿತದಿಂದ ಮುಕ್ತವಾಗಿ, ತನ್ನದೇ ಆದ ಸ್ವತಂತ್ರ ಅಸ್ತಿತ್ವ ಕಾಯ್ದುಕೊಂಡಿದ್ದ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಭ್ರಷ್ಟಾಚಾರಿಗಳಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಇದರಿಂದ ಅಕ್ರಮ, ಅವ್ಯವಹಾರ, ಕಾನೂನುಬಾಹಿರ ಚಟುವಟಿಕೆ ನಡೆಸಲು ಸಾರ್ವಜನಿಕ ಜೀವನದಲ್ಲಿರುವವರು ಹಿಂದೆಮುಂದೆ ನೋಡುತ್ತಿದ್ದರು. ಪ್ರಭಾವಿ ರಾಜಕಾರಣಿಗಳು ಕೂಡ ಲೋಕಾಯುಕ್ತವೆಂದರೆ ಭಯಭೀತರಾಗುವಂತಹ ಸ್ಥಿತಿಯಿತ್ತು. ಆದರೆ ಯಾವಾಗ ರಾಜ್ಯ ಸರಕಾರ ಎಸಿಬಿ ರಚನೆ ಮಾಡಿ ಲೋಕಾಯುಕ್ತಕ್ಕಿದ್ದ ಅಧಿಕಾರ ಕಿತ್ತುಕೊಂಡಿತೋ ಅಂದಿನಿಂದ ಸಾರ್ವಜನಿಕ ಕ್ಷೇತ್ರಗಳಲ್ಲಿ ಏಕಾಏಕಿ ಭ್ರಷ್ಟಾಚಾರದ ಪ್ರಮಾಣ ಕೂಡ ಏರುಗತಿಯಲ್ಲಿ ಸಾಗಿದೆ. ಲಂಚ ಕೇಳಲು ಮೀನಮೇಷ ಎಣಿಸುತ್ತಿದ್ದವರು ಇದೀಗ ನೇರವಾಗಿಯೇ ಲಂಚಕ್ಕೆ ಡಿಮ್ಯಾಂಡ್ ಮಾಡುವಂತಹ ಪರಿಸ್ಥಿತಿಯಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸುತ್ತಾರೆ. ಕಡಿವಾಣ ಹಾಕಿ:
ಕೆಲ ಸರಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ರಂಗದ ಹಲವು ಕ್ಷೇತ್ರಗಳಲ್ಲಿ ಪ್ರಸ್ತುತ ಲಂಚದ ಹಾವಳಿ ಹಿಂದಿಗಿಂತಲೂ ಹೆಚ್ಚಾಗಿದೆ. ಇದರಿಂದ ಅಮಾಯಕ ನಾಗರಿಕರು ತೀವ್ರ ಸಂಕಷ್ಟ ಪಡುವಂತಾಗಿದೆ. ಭ್ರಷ್ಟಾಚಾರದ ಹಾವಳಿ ತಡೆಗೆ ಸರಕಾರ ಕಠಿಣ ಕ್ರಮಕೈಗೊಳ್ಳಬೇಕು. ನಾಗರಿಕರಿಗೆ ನೆರವಾಗುವ ಕೆಲಸ ಮಾಡಬೇಕು ಎಂದು ಪ್ರಜ್ಞ್ಞಾವಂತ ನಾಗರಿಕರು ಆಗ್ರಹಿಸುತ್ತಾರೆ. ಒಟ್ಟಾರೆ ಲೋಕಾಯುಕ್ತ-ಎಸಿಬಿಯ ಗೊಂದಲದಿಂದ ಭ್ರಷ್ಟಾಚಾರದ ಹಾವಳಿ ಮಿತಿಮೀರುತ್ತಿರುವುದಂತೂ ಸತ್ಯವಾಗಿದೆ. ಇನ್ನಾದರು ಆಡಳಿತಗಾರರು ಎಚ್ಚೆತ್ತುಕೊಂಡು ಭ್ರಷ್ಟಾಚಾರದ ಮಹಾಮಾರಿಯಿಂದ ಜನಸಾಮಾನ್ಯರನ್ನು ಪಾರು ಮಾಡಬೇಕಾಗಿದೆ. ಗೊಂದಲ:
ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಇಂದಿಗೂ ಕೂಡ ಅದೆಷ್ಟೋ ನಾಗರಿಕರು ಲೋಕಾಯುಕ್ತ ಕಚೇರಿ ಸಂಪರ್ಕಿಸುವ ಕೆಲಸ ಮಾಡುತ್ತಿದ್ದಾರೆ. ಎಸಿಬಿಯ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಈ ಕಾರಣದಿಂದ ಜನಸಾಮಾನ್ಯ ದೂರುದಾರರು ಗೊಂದಲಕ್ಕೀಡಾಗುವಂತಾಗಿದ್ದು, ಮಾಹಿತಿಯ ಕೊರತೆಯಿಂದ ಎಸಿಬಿ ಕಚೇರಿಗೆ ತೆರಳಿ ದೂರು ದಾಖಲಿಸಲು ಮುಂದಾಗುತ್ತಿಲ್ಲವಾಗಿದೆ. ಇದರಿಂದ ಎಸಿಬಿಯಲ್ಲಿ ದೂರು ದಾಖಲಿಸುವ ನಾಗರಿಕರ ಸಂಖ್ಯೆ ಕಡಿಮೆಯಿದೆ. ಹಾಗೆಂದು ಭ್ರಷ್ಟಾಚಾರ, ಅವ್ಯವಹಾರ, ಅಕ್ರಮಗಳು ಕಡಿಮೆಯಾಗಿವೆಯಂತಲ್ಲ. ಎಸಿಬಿಯ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿಯ ಕೊರತೆಯ ಕಾರಣದಿಂದ ದೂರು ದಾಖಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಬೇಕಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.







