ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ,
ಕಡೂರು, ಆ. 25: ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತೋಟದ ಮನೆಯಲ್ಲಿ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತಡರಾತ್ರಿ ತಾಲೂಕಿನ ಚನ್ನಾಪುರದಲ್ಲಿ ನಡೆದಿದೆ.
ಚನ್ನಾಪುರದ ನಿವಾಸಿ ಕವಿತಾ (35) ಕೊಲೆಗೀಡಾದ ಮಹಿಳೆ ಮತ್ತು ರಾಜಶೇಖರ್ (40)ಆತ್ಮಹತ್ಯೆಗೈದ ವ್ಯಕ್ತಿ.
ಮೃತ ಕವಿತಾ ಅವರ ದೇಹದಲ್ಲಿ ಮಚ್ಚಿನಿಂದ ಕಡಿದ 10ಕ್ಕೂ ಹೆಚ್ಚು ಗಾಯಗಳಾಗಿದ್ದು, ಕವಿತಾಳ ಪತಿ ರಾಜಶೇಖರ್ ತನ್ನ ತೋಟದ ಮನೆಯಲಿಪ್ಲ ಹಗ್ಗದ ಸಹಾಯದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಚಿತ್ರ ಕಂಡುಬಂತು.
ಘಟನೆಯಿಂದ ಚನ್ನಾಪುರ ಜನತೆ ಬೆಚ್ಚಿಬಿದ್ದಿದ್ದು, ರಾಜಶೇಖರ್ ವಾಸದ ಮನೆ ಮುಂದೆ ಜನಜಂಗುಳಿಯೇ ಸೇರಿತ್ತು. ಮನೆಯನ್ನು ಪೋಲಿಸರು ಸುತ್ತುವರಿದಿದ್ದರು. ಘಟನೆ ತಿಳಿಯುತ್ತಲೇ ಗ್ರಾಮಕ್ಕೆ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಪ್ಪನಾಯಕ್, ಡಿವೈಎಸ್ಪಿ ರಾಜನ್ ವೈ. ನಾಯಕ್, ಆರಕ್ಷಕ ವೃತ್ತನಿರೀಕ್ಷಕ ಕೆ. ಸತ್ಯನಾರಾಯಣ, ಆರಕ್ಷಕ ಉಪನಿರೀಕ್ಷಕ ಸಿ.ರಾಕೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗ ಬೀಡುಬಿಟ್ಟಿತ್ತು.
ಮೃತರು ಓರ್ವ ಮಗ ಕುಶಾಲ್(17)ನನ್ನು ಅಗಲಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಪ್ರಭಾರ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಪ್ಪನಾಯಕ್ ಮಾತನಾಡಿ, ಮೇಲ್ನೊಟಕ್ಕೆ ಇದೊಂದು ಅನೈತಿಕ ಸಂಬಂಧದಿಂದ ಆಗಿರಬಹುದಾದ ದುರ್ಘಟನೆ, ಮಹಿಳೆ ಕವಿತಾ ಮೇಲೆ ಮಾರಣಾಂತಿಕ ಗಾಯಗಳು ಆಗಿರುವುದನ್ನು ನೋಡಿದರೆ ಈ ನಿರ್ಧಾರಕ್ಕೆ ಬರಬಹುದು, ಇಲಾಖೆ ಈ ಬಗ್ಗೆ ತನಿಖೆ ನಡೆಸಿದ ಮೇಲೆ ಸತ್ಯಾಂಶ ಬೆಳಕಿಗೆ ಬರಲಿದೆ ಎಂದರು.







