ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆ.2ರಂದು ದೇಶವ್ಯಾಪಿ ಮುಷ್ಕರ

ಮಡಿಕೇರಿ,ಆ.25: ಕೇಂದ್ರ ಸರಕಾರದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಯನ್ನು ವಿರೋಧಿಸಿ ಸೆ.2ರಂದು ದೇಶ ವ್ಯಾಪಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಸುಮಾರು 11 ಸಂಘಟನೆಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಅಂದು ದೇಶದ ಎಲ್ಲ ಕ್ಷೇತ್ರಗಳ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಮತ್ತು ಕರ್ನಾಟಕದಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರದ ಕಾರ್ಯ ವೈಖರಿಯಿಂದ ಬೇಸತ್ತ ದೇಶದ ಜನ ಅನೇಕ ನಿರೀಕ್ಷೆಗಳೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆದರೆ, ಬಿಜೆಪಿ ನೇತೃತ್ವದ ಸರಕಾರ ಕೂಡ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗೆ ಹೆಚ್ಚು ಒತ್ತು ನೀಡಿ ಕಾರ್ಮಿಕ ವರ್ಗದ ಹಿತವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿಯ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಆದ್ದರಿಂದ ಸೆ.2ರಂದು ನಡೆಯುವ ಮುಷ್ಕರದ ಸಂದರ್ಭ ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಗುವುದು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಒತ್ತಾಯಿಸಲಾಗುವುದೆಂದು ಅವರು ತಿಳಿಸಿದರು. ಬಿಜೆಪಿ ಅಧಿಕಾರಕ್ಕೆ ಬರುವ ಸಂದರ್ಭ ನೀಡಿದ ಭರವಸೆಗಳು ಹುಸಿಯಾಗಿದ್ದು, ಕೊಡಗು ಜಿಲ್ಲೆಯ ಲೈನ್‌ಮನೆಗಳಲ್ಲಿ ಇಂದಿಗೂ ಕಾರ್ಮಿಕರು ಗುಲಾಮರಂತೆ ಜೀವನ ನಡೆಸುತ್ತಿದ್ದಾರೆ. ಇವರಿಗೆ ವಸತಿ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಲು ಇಂದಿಗೂ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಸಾಧ್ಯವಾಗಿಲ್ಲವೆಂದು ರಮೇಶ್ ಆರೋಪಿಸಿದರು.
ಸೆ.2 ರಂದು ಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ಚೇಂಬರ್ ಆಫ್ ಕಾಮರ್ಸ್, ಖಾಸಗಿ ಬಸ್ ಮಾಲಕರು ಹಾಗೂ ಆಟೊ ಚಾಲಕರು ಕೂಡ ಬೆಂಬಲ ನೀಡಬೇಕು ಮತ್ತು ಅಂದು ವರ್ತಕರು ಕನಿಷ್ಠ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಕಾರ್ಮಿಕರಿಗೆ ಬೆಂಬಲ ಸೂಚಿಸಬೇಕೆಂದು ಅವರು ಮನವಿ ಮಾಡಿದರು. ಅಂಗನವಾಡಿ, ಅಕ್ಷರ ದಾಸೋಹ, ಗ್ರಾಪಂ ನೌಕರರ ಸಂಘ ಸೇರಿದಂತೆ ಜಿಲ್ಲೆಯ ಎಲ್ಲ್ಲ ಕ್ಷೇತ್ರಗಳ ಕಾರ್ಮಿಕರು ಹಾಗೂ ಸಿಬ್ಬಂದಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವ
ಣಿಗೆ ನಡೆಯಲಿದ್ದು, ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಮೇಶ್ ತಿಳಿಸಿದರು. ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಚ್‌ಎಂಎಸ್, ಟಿಯುಸಿಸಿ, ಎಐಸಿಸಿಟಿುು, ಬಿಎಸ್ಸೆನ್ನೆಲ್, ಬ್ಯಾಂಕ್, ಎಲ್‌ಐಸಿ, ಕೇಂದ್ರ ಮತ್ತು ರಾಜ್ಯ ಸೇವಾ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಅವರು ಹೇಳಿದರು. ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಹಮೀದ್ ಮಾತನಾಡಿ, ಜಿಲ್ಲೆಯಲ್ಲಿ ಶೇ.80 ರಷ್ಟು ಮಂದಿ ಕಾರ್ಮಿಕ ವರ್ಗದವರೇ ಇದ್ದು, ಇವರಿಂದಲೇ ಹೆಚ್ಚಿನ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಆದ್ದರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಾರ್ಮಿಕರು ನಡೆಸುತ್ತಿರು
ವ ಪ್ರತಿಭಟನೆಗೆ ವರ್ತಕರು ಹೆಚ್ಚಿನ ಬೆಂಬಲ ಸೂಚಿಸಬೇಕೆಂದರು. ಬಿಎಸ್ಸೆನ್ನೆಲ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂತೋಣಿ ಮಾತನಾಡಿ, ಕೇಂದ್ರ ಸರಕಾರ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಭರದಲ್ಲಿ ದೇಶದ ಕಾರ್ಮಿಕರ ಶ್ರಮವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಬಿಎಸ್ಸೆನ್ನೆಲ್ ಲಾಭದ ಹಾದಿಯಲ್ಲಿ ಸಾಗುತ್ತಿದ್ದರೂ ಖಾಸಗೀಕರಣದತ್ತ ಕೇಂದ್ರ ಒಲವು ತೋರುತ್ತಿದೆ. ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಇವರಿಗೆ ಕನಿಷ್ಠ ವೇತನವನ್ನು ಕೂಡ ನೀಡದೆ ಮಿತಿ ಮೀರಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ. ಸೆ.2 ರ ಮುಷ್ಕರದಲ್ಲಿ ಎಲ್ಲಾ ಬಿಎಸ್ಸೆನ್ನೆಲ್ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದರು. ಇನ್ಶೂರೆನ್ಸ್ ಕಾರ್ಪೊರೇಶನ್ ಎಂಪ್ಲಾಯೀಸ್ ಯೂನಿಯನ್‌ನ ಮೈಸೂರು ವಿಭಾಗೀಯ ಉಾಧ್ಯಕ್ಷರಾದ ಬಿ.ಎ.ಜನಾರ್ದನ್, ಎಐಟಿಯುಸಿ ಅಧ್ಯಕ್ಷ ಸೋಮಪ್ಪ ಹಾಗೂ ಐಎನ್‌ಟಿಯುಸಿಯ ಅಧ್ಯಕ್ಷ ಧರ್ಮಪ್ಪಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.







