ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪುಟಾಣಿಗಳ ಸಂಭ್ರಮ

ಮಡಿಕೇರಿ, ಆ.25: ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಪುಟಾಣಿಗಳು ಸಂಭ್ರಮದಿಂದ ಆಚರಿಸಿದರು. ಮುದ್ದು ಮೊಗದ ಕೃಷ್ಣ-ರಾಧೆಯರ ನೃತ್ಯ, ಕೃಷ್ಣನ ತುಂಟತನಗಳನ್ನು ಪ್ರತಿಬಿಂಬಿಸುವ ದೃಶ್ಯ, ಮೊಸರು ಕುಡಿಕೆಯನ್ನು ಒಡೆಯುವ ಕಲಾ ಪ್ರದರ್ಶನಗಳಲ್ಲಿ ಪುಟಾಣಿಗಳು ಪ್ರೇಕ್ಷಕರನ್ನು ಆಕರ್ಷಿಸಿದರು.
ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯದ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳನ್ನು ಒಳಗೊಂಡಂತೆ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಎಂ.ಬಿ. ಬೆಳ್ಯಪ್ಪ ಉದ್ಘಾಟಿಸಿದರು.
ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶ್ರೀನಿವಾಸನ್ ಮಾತನಾಡಿ, ಪುಟಾಣಿ ಮಕ್ಕಳು ತಮಗೆ ತಿಳಿಸುವ ಯಾವುದೇ ವಿಚಾರವನ್ನು, ಅದರ ಒಳಿತು ಕೆಡುಕುಗಳನ್ನು ನೋಡದೆ ಸ್ವೀಕರಿಸಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ವಿಚಾರಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು. ಬದುಕಿನಲ್ಲಿ ನಮ್ಮ ಸಂಪರ್ಕಕ್ಕೆ ಬರುವ ಹಿರಿಯರು, ಕಿರಿಯರು, ಮಕ್ಕಳು ಯಾರನ್ನೂ ಕಡೆಗಣಿಸದೆ, ಅವರ ವಿಚಾರಗಳು, ಚಿಂತನೆಗಳನ್ನು ಗೌರವಿಸಬೇಕು ಮತ್ತು ಮಹತ್ವ ನೀಡುವುದು ಅಗತ್ಯವೆಂದರು. ಕಿರೀಟ ತೊಟ್ಟು ಕೊಳಲು ಹಿಡಿದ ಪುಟಾಣಿ ಬಾಲ ಗೋಪಾಲರು, ಆಕರ್ಷಕ ವಸ್ತ್ರ ತೊಟ್ಟ ಪುಟಾಣಿ ರಾಧೆಯರು ಹರೇ ಮುರಾರಿ.. ಕೃಷ್ಣನನ್ನು ಭಜಿಸುವ ಹಾಡಿಗೆ ಹಾಕಿದ ಹೆಜ್ಜೆ ಮನಮೋಹಕವಾಗಿ ಮೂಡಿಬಂತು.
ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಪುಟಾಣಿಗಳಾದ ಆಯುಷ್ಮಾನ್ ಮತ್ತು ತಾನ್ಯಾ ನಿರೂಪಿಸಿದರು. ಸ್ವಾಗತ್ ಸ್ವಾಗತಿಸಿದರು. ಕೃಷ್ಣ ಜನ್ಮಾಷ್ಟಮಿಯ ಮಹತ್ವವನ್ನು ಪುಟಾಣಿ ಶ್ರೇಯ ತಿಳಿಸಿಕೊಟ್ಟರು. ಪೂವಣ್ಣ ವಂದಿಸಿದರು.







