‘ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ’
ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ

ಕಡೂರು, ಆ.25: ಮಕ್ಕಳು ಪಾಠದ ಜೊತೆಗೆ ಕ್ರೀಡೆಗೂ ಹೆಚ್ಚಿನ ಗಮನ ನೀಡಬೇಕಿದೆ. ಸರಕಾರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಗೆಲುವು ಮುಖ್ಯ ಎಂದು ತಿಳಿದುಕೊಳ್ಳಬಾರದು, ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋತವರು ಬೇಸರಿಸಬಾರದು. ಮುಂದಿನ ದಿನಗಳಲ್ಲಿ ಗೆಲುವು ಸಿಗಲಿದೆ. ನಿಜವಾದ ಪ್ರತಿಭೆಗಳನ್ನು ತೀರ್ಪುಗಾರರು ಗುರುತಿಸಬೇಕಿದೆ. ಯಾವುದೇ ಮಕ್ಕಳಿಗೆ ಅನ್ಯಾಯವಾಗಬಾರದು ಎಂದು ತಿಳಿಸಿದರು. ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಗಿರೀಶ್ ಉಪ್ಪಾರ್ ಅವರು ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ನಂತರ ಮಾತನಾಡಿ, ಈ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಲಾಗುವುದು. ಅದೇ ರೀತಿ ಕಾಂಪೌಂಡ್ ನಿರ್ಮಿಸಿ ಕೊಡಲಾಗುವುದು. ಕಡೂರು ಕ್ಷೇತ್ರದ 150 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಿಕೊಡಲಾಗುವುದು. ಚೌಳಹಿರಿಯೂರು ಶಾಲೆಗೆ ಜಿಮ್ ಪ್ರಾರಂಭಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ಷಡಾಕ್ಷರಪ್ಪ, ಪುರಸಭೆ ಅಧ್ಯಕ್ಷ ಅನಿತಾ ರಾಜ್‌ಕುಮಾರ್, ಪುರಸಭೆ ಸದಸ್ಯರಾದ ರಾಜೇಶ್, ಹರೀಶ್, ಪ್ರಭಾಕರ್, ಗೋವಿಂದಪ್ಪ, ಎಂ.ಸಿ. ಚಂದ್ರಪ್ಪ, ಜಯಣ್ಣ, ದೊಡ್ಡ ಬಸವೇಗೌಡ, ಮುಖ್ಯೋಪಾಧ್ಯಾಯರಾದ ಎನ್. ಪರಮೇಶ್ವರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





