‘ಆರೋಗ್ಯ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ: ಶಾಸಕಿ ಶಾರದಾ ಪೂರ್ಯನಾಯ್ಕಾ
ಶಿವಮೊಗ್ಗ,ಆ.25: ಜನರ ಆರೋಗ್ಯ ರಕ್ಷಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕಾ ಹೇಳಿದ್ದಾರೆ.
ಜಿಲಾ್ಲಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೊನಗವಳ್ಳಿ ಗ್ರಾಪಂ ವ್ಯಾಪ್ತಿಯ ಸೇವಾಲಾಲ್ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನಾರೋಗ್ಯ ಇಂದಿನ ಸಾಮಾನ್ಯ ಸಮಸ್ಯೆಯಾಗಿದೆ. ಆರೋಗ್ಯ ರಕ್ಷಣೆಗಾಗಿ ಬಡವರು ತಮ್ಮ ಆಸ್ತಿಪಾಸ್ತಿಗಳನ್ನೆಲ್ಲ ಕಳೆದುಕೊಂಡ ಉದಾಹರಣೆಗಳಿವೆ. ಆದ್ದರಿಂದ ಬಡವರ ಆರ್ಥಿಕ ಹೊರೆಯನ್ನು ತಗ್ಗಿಸುವ ಸಲುವಾಗಿ ಹಾಗೂ ಬಡವರ ಆರೋಗ್ಯ ರಕ್ಷಣೆಗಾಗಿ ಸರಕಾರ ಹಲವಾರು ಆರೋಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಅಲ್ಲದೆ ಎಪಿಎಲ್, ಬಿಪಿಎಲ್ ಕುಟುಂಬಗಳಿಗೂ ಆರೋಗ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಬಹುತೇಕ ಜನರಿಗೆ ಈ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.
ಪ್ರಸ್ತುತ ಸರಕಾರದಿಂದ ಆರೋಗ್ಯ ಯೋಜನೆಗಳ ಕುರಿತು ಅರಿವು ಮೂಡಿಸುವ ಬೃಹತ್ ಆರೋಗ್ಯ ಅಭಿಯಾನ ಕಲಾಜಾಥ ಕಾರ್ಯಕ್ರಮ ಇದೇ 23ರಿಂದ 28ರವರೆಗೆ ಆರು ದಿನಗಳ ಕಾಲ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದರು.
ಜಿಪಂ ಸಿಇಒ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ, ಕೊನಗವಳ್ಳಿ ಗ್ರಾಪಂ ಅಧ್ಯಕ್ಷ ಸುಗಂಧರಾಜು, ವಾಜಪೇಯಿ ಸುವರ್ಣ ಆರೋಗ್ಯ ರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕ ಪ್ರಕಾಶ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.







