ದುಬೈಯಲ್ಲಿ ಕೋಟಿ ಮೌಲ್ಯದ ಚಾಕಲೇಟ್‌ನೊಂದಿಗೆ ಚಾಲಕ ನಾಪತ್ತೆ!
ಈ ಸ್ವೀಟ್ ಡ್ರೈವರ್ ಹೋದದ್ದಾದರೂ ಎಲ್ಲಿಗೆ?
.jpeg)
ದುಬೈ: ಭಾರತ ಮೂಲದ ಚಾಲಕನೊಬ್ಬ ದುಬೈಯಿಂದ ಸೌದಿ ಅರೇಬಿಯಾಕ್ಕೆ ಹೋಗುವ ದಾರಿಯಲ್ಲಿ ಸುಮಾರು ಐದೂವರೆ ಲಕ್ಷ ಧಿರಂ (ಒಂದು ಕೋಟಿ ರೂಪಾಯಿ) ಮೌಲ್ಯದ ಚಾಕಲೇಟ್‌ನೊಂದಿಗೆ ನಾಪತ್ತೆಯಾಗಿದ್ದಾನೆ.
ಸಾಜೀದ್ ಪಟೇಲ್ ಎಂಬ 40 ವರ್ಷದ ಮುಂಬೈ ಮೂಲದ ನಿವಾಸಿ ಆರು ವರ್ಷದಿಂದ ದುಬೈನಲ್ಲಿದ್ದ. ಆದರೆ ಇತ್ತೀಚೆಗೆ ಒಂದು ಟ್ರಕ್ ಮಾರ್ಸ್ ಚಾಕಲೇಟ್ ಬಾರ್‌ಗಳೊಂದಿಗೆ ಈತ ನಾಪತ್ತೆಯಾಗಿದ್ದಾನೆ ಎಂದು ಮಿಡ್-ಡೇ ವರದಿ ಮಾಡಿದೆ.
ಸಾಜೀದ್‌ನನ್ನು ಎರಡು ವರ್ಷದಿಂದ ಕೆಲಸಕ್ಕೆ ನಿಯೋಜಿಸಿಕೊಂಡಿದ್ದ ಏವಿಯೇಶನ್ ಜನರಲ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ ಎಂಬ ರಸ್ತೆ ಸಾರಿಗೆ ಸಂಸ್ಥೆಯ ಹೇಳಿಕೆ ಪ್ರಕಾರ, ಆತನನ್ನು ಹುಡುವ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ದುಬೈ ಪೊಲೀಸರು ಆತನ ಜಾಡು ಹಿಡಿಯಲು ಪ್ರಯತ್ನ ನಡೆಸಿದ್ದಾರೆ.
ಆಗಸ್ಟ್ 4ರಂದು ಸೌದಿ ಅರೇಬಿಯಾದ ಬುರೈದ ಪಟ್ಟಣಕ್ಕೆ ಚಾಕಲೇಟ್ ತುಂಬಿದ್ದ ಲಾರಿಯನ್ನು ಆತ ಚಾಲನೆ ಮಾಡಿಕೊಂಡು ಹೊರಟಿದ್ದ. ಆತ ಆಗಸ್ಟ್ 12ರವರೆಗೂ ಸಂಪರ್ಕದಲ್ಲಿದ್ದ. ಜಿಪಿಎಸ್ ಆತನ ಸ್ಥಳವನ್ನು ರಿಯಾದ್ ಎಂದು ತೋರಿಸುತ್ತಿತ್ತು ಎಂದು ಕಂಪನಿಯ ಪ್ರಧಾನ ವ್ಯವಸ್ಥಾಪಕ ರಾಬಿನ್ಸನ್ ರೋಡ್ರಿಗ್ಸ್ ಹೇಳಿದ್ದಾರೆ. ಆಗಸ್ಟ್ 13ರಂದು ಆತ ಬುರೈದ ಪಟ್ಟಣದಿಂದ ಕೇವಲ 450 ಕಿಲೋಮೀಟರ್ ದೂರದಲ್ಲಿದ್ದಾಗ ಸಂಪರ್ಕ ಕಡಿದುಕೊಂಡಿದ್ದಾನೆ. ಈ ಟ್ರಕ್ ಮೌಲ್ಯವೇ ಸುಮಾರು 50 ಲಕ್ಷ ರೂಪಾಯಿ. ಇದಕ್ಕೂ ಮುನ್ನ ಪಟೇಲ್ ಗಲ್ಫ್‌ನಲ್ಲಿ 50 ಟ್ರಿಪ್ ಗಳನ್ನು ಮಾಡಿದ್ದ.







