‘ಸ್ಕಾರ್ಪಿನ್ ಸೋರಿಕೆ’ಗೆ ಫ್ರೆಂಚ್ ಕನೆಕ್ಷನ್?
ಹೊಸದಿಲ್ಲಿ, ಆ.25: ಭಾರತೀಯ ಸ್ಕಾರ್ಪಿನ್ ಯೋಜನೆಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿರುವುದು ಗಂಭೀರ ವಿಚಾರ. ಫ್ರಾನ್ಸ್‌ನ ರಕ್ಷಣೆ ಭದ್ರತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಸೋರಿಕೆಯಾಗಿರುವ ದಾಖಲೆಗಳು ಯಾವ ಸ್ವರೂಪದ್ದು ಎಂದು ಪತ್ತೆ ಮಾಡಲಿದ್ದಾರೆ ಎಂದು ಭಾರತದ ಜತೆ ಜಂಟಿ ಸಹಭಾಗಿತ್ವದಲ್ಲಿ ರಹಸ್ಯ ಸಬ್‌ಮೆರಿನ್‌ಗಳನ್ನು ನಿರ್ಮಿಸಲು ಮುಂದಾಗಿರುವ ಫ್ರಾನ್ಸ್‌ನ ಡಿಸಿಎನ್‌ಎಸ್ ಪ್ರಕಟಿಸಿದೆ.
ಸೋರಿಕೆಯಾದ ಮಾಹಿತಿಗಳಲ್ಲಿ ಈ ರಹಸ್ಯ ಸ್ಕಾರ್ಪಿನ್‌ಸಬ್‌ಮೆರಿನ್‌ಗಳ ಸಾಮರ್ಥ್ಯಗಳು, ಯಾವ ಅಂತರದಲ್ಲಿ ಗುಪ್ತಚರ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ವಿವಿಧ ಮಟ್ಟದ ವೇಗದಲ್ಲಿ ಸದ್ದು ಮಾಡುತ್ತದೆ ಎಂಬ ವಿವರ, ಎಷ್ಟು ಆಳಕ್ಕೆ ಅದು ಧುಮುಕುತ್ತದೆ, ವ್ಯಾಪ್ತಿ ಮತ್ತು ಸಹಿಷ್ಣುತೆ, ಮ್ಯಾಗ್ನೆಟಿಕ್ ಮತ್ತು ಇಲೆಕ್ಟ್ರೋ ಮ್ಯಾಗ್ನಟಿಕ್ ಮಾಹಿತಿ, ಪ್ರೊಪೆಲ್ಲರ್‌ಗಳ ಸದ್ದು, ಪೆರಿಸ್ಕೋಪ್ ಬಳಕೆ ಹಾಗೂ ಟೋರ್ಪೆಡೊ ಲಾಂಚ್‌ನ ವೇಗದ ಸ್ಥಿತಿ ಮತ್ತಿತರ ಮಾಹಿತಿ ಸೋರಿಕೆಯಾಗಿವೆ ಎಂದು ವರದಿಗಳು ತಿಳಿಸಿವೆ.
‘ದ ಆಸ್ಟ್ರೇಲಿಯನ್’ ವರದಿಯ ಪ್ರಕಾರ ಈ ಒಪ್ಪಂದದ ಉಪ ಗುತ್ತಿಗೆದಾರನಾಗಿರುವ ಫ್ರಾನ್ಸ್ ನೌಕಾಪಡೆಯ ಮಾಜಿ ಅಧಿಕಾರಿ ಈ ಸೋರಿಕೆಯ ಹಿಂದಿದ್ದಾರೆ. ಈ ಮಾಹಿತಿಗಳು 2011ರಲ್ಲಿ ಫ್ರಾನ್ಸ್‌ನಲ್ಲಿ ದಾಖಲಾದ ಅಂಶಗಳಾಗಿವೆ. ಫ್ರಾನ್ಸ್ ಕಂಪೆನಿ ಆರಂಭದಲ್ಲಿ, ಭಾರತದಿಂದ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿತ್ತು. ತಾನು ಇವುಗಳನ್ನು ಸರಬರಾಜು ಮಾಡುವುದಾದರೂ ಇದರ ತಾಂತ್ರಿಕ ಮಾಹಿತಿಗಳಿಗೆ ತನಗೆ ಲಭ್ಯತೆ ಇಲ್ಲ ಎಂದು ಹೇಳಿಕೊಂಡಿತ್ತು.
ಆದರೆ ಚಿಲಿಗೆ ಫ್ರಿಗೇಟ್ಸ್ ಮಾರಾಟ ಹಾಗೂ ರಷ್ಯಾಗೆ ನೆಲ ಹಾಗೂ ಸಮುದ್ರದಲ್ಲಿ ಚಲಿಸುವ ನೌಕೆಗಳನ್ನು ಮಾರಾಟ ಮಾಡುವ ಅಂಶ ಕೂಡಾ ಸೋರಿಕೆಯ ಭಾಗವಾಗಿರುವುದರಿಂದ ಇದು ಫ್ರಾನ್ಸ್ ಕಡೆಯಿಂದಲೇ ಸೋರಿಕೆಯಾಗಿರಬೇಕು ಎಂಬ ವಾದಕ್ಕೆ ಪುಷ್ಟಿ ನೀಡುತ್ತದೆ.





