ದೇಶದ ಶೇ.92 ವಿದ್ಯುದೀಕೃತ ಗ್ರಾಮಗಳಲ್ಲಿ ವಿದ್ಯುತ್ತಿಲ್ಲ!
ಹೊಸದಿಲ್ಲಿ, ಆ.25: ಸರಕಾರವು ವಿದ್ಯುದೀಕರಿಸಲು ಉದ್ದೇಶಿಸಿರುವ 18,452 ಜನವಸತಿ ಗ್ರಾಮಗಳಲ್ಲಿ ಸುಮಾರು ಶೇ.78ರಷ್ಟು ಗ್ರಾಮಗಳಿಗೆ ವಿದ್ಯುತ್ ಬಂದಿದೆ. ಆದಾಗ್ಯೂ, ಹೊಸದಾಗಿ ವಿದ್ಯುದೀಕರಿಸಲ್ಪಟ್ಟಿರುವ ಮನೆಗಳು ಸೇರಿ 10,072 ಗ್ರಾಮಗಳಲ್ಲಿ ಶೇ.92 ಗ್ರಾಮಗಳಿಗೆ ವಿದ್ಯುತ್ ಬಂದಿಲ್ಲ.
2016ರ ಆ.22ರಂದು ಸರಕಾರವು ಹೊರಡಿಸಿರುವ ಮಾಹಿತಿಯಲ್ಲಿ ಭಾರತದ ವಿದ್ಯುದೀಕರಿಸಲ್ಪಡದೆ ಉಳಿದಿರುವ 18,452 ಗ್ರಾಮಗಳನ್ನು ವಿದ್ಯುದೀಕರಿಸುವ ಹಾಲಿ ಅಭಿಯಾನದ ಅಂಗವಾಗಿ ಹಿಂದಿನ ವಾರ(ಆ.15-21) 28 ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿದೆಯೆಂದು ತಿಳಿಸಿದೆ.
2017ರ ಮಾರ್ಚ್‌ನೊಳಗೆ ಪೂರ್ಣಗೊಳಿಸ ಬೇಕಾದ ಹೊಸ ಗುರಿಯನ್ನು ತಲುಪಲು ಸರಾಸರಿ ದಿನಕ್ಕೆ 36ರಂತೆ ವಾರಕ್ಕೆ 252 ಗ್ರಾಮಗಳನ್ನು ವಿದ್ಯುದೀಕರಿಸುವ ನಿಗದಿಯನ್ನು ಕಳೆದ ವಾರ ಸರಕಾರ ತಪ್ಪಿದೆ. ಪ್ರಧಾನಿ ನರೇಂದ್ರ ಮೋದಿ ನಿಗದಿಪಡಿಸಿರುವ ಗಡುವು 1 ಸಾವಿರ ದಿನಗಳು. ಆದರೆ, ಸರಕಾರದ ನೇರ ವೆಬ್ ಮಾಹಿತಿ, ಅಂತಿಮ ಗಡುವು 2017ರ ಮಾರ್ಚ್ ಆಗಿದ್ದು, ಕೇವಲ 200 ದಿನಗಳಷ್ಟು ದೂರವಿದೆಯೆಂದು ಹೇಳಿದೆ.
ಕಳೆದ ನಾಲ್ಕು ವಾರಗಳಲ್ಲಿ ಸರಾಸರಿ ದಿನಕ್ಕೆ ಸುಮಾರು 34 ಗ್ರಾಮಗಳನ್ನು ವಿದ್ಯುದೀಕರಿಸಲಾಗಿದೆ. ಆದುದರಿಂದ ಯೋಜನೆಯು ಸಮಯದೊಳಗೆ ಗುರಿ ತಲುಪುವ ಹಾದಿಯಲ್ಲಿದೆ.
ವಿದ್ಯುದೀಕರಣದ ನಿಕಟ ಉಸ್ತುವಾರಿಯನ್ನೀಗ ಗ್ರಾಮ ವಿದ್ಯುತ್ ಅಭಿಯಂತರು(ಗ್ರಾಮ ವಿದ್ಯುದೀಕರಣ ಇಂಜಿನಿಯರ್) ನೋಡಿಕೊಳ್ಳು ತ್ತಿದ್ದಾರೆ. ತಲುಪಬೇಕಾದ ಮಾಸಿಕ ಗುರಿ ಇದರಲ್ಲಿದ್ದು, 12 ಹಂತಗಳ ವಿದ್ಯುದೀಕರಣ ಪ್ರಕ್ರಿಯೆಯನ್ನು ರಚಿಸಲಾಗಿದೆ.
ಯೋಜನೆಯು ಸಂಪೂರ್ಣ ಯಶಸ್ವಿಯಾಗ ಬೇಕಾದರೆ, 18,452 ಗ್ರಾಮಗಳಾದ್ಯಂತ ಎಲ್ಲ 12 ಹಂತಗಳು ಪೂರ್ಣಗೊಳ್ಳಬೇಕು. ಇದರಲ್ಲಿ ಶೇ.57ರಷ್ಟನ್ನು ಸಾಧಿಸಲಾಗಿದೆಯೆಂದು ವೆಬ್‌ಸೈಟ್ ತಿಳಿಸಿದೆ.
ಇದರಲ್ಲಿ 12 ಹಂತಗಳ ವಿದ್ಯುದೀಕರಣ ಪ್ರಕ್ರಿಯೆಯ ಕೊನೆಯ 4 ಹಂತಗಳ ಸಾಧನೆ ಶೇ.32ರಷ್ಟು ನಡೆದಿದ್ದರೆ, ಶೇ.35ರಷ್ಟು ಕೇವಲ ಮೊದಲ ನಾಲ್ಕು ಹಂತಗಳಲ್ಲಿದೆ. ಕೇವಲ ಶೇ.8ರಷ್ಟು ಮಾತ್ರ ಅಂತಿಮ ಹಂತದ ವಿದ್ಯುದೀಕರಣಕ್ಕೆ ತಲುಪಿದೆ. ಈ ಗ್ರಾಮಗಳು ‘ವಿದ್ಯುದೀಕರಿಸಲ್ಪಟ್ಟಿವೆ’ ಎಂಬ ಹಂತ ತಲುಪಿದ್ದು, ‘ಹಸ್ತಾಂತರಕ್ಕೆ’ ಸಿದ್ಧವಾಗಿವೆ.
ಆದಾಗ್ಯೂ, ಈ ಗ್ರಾಮಗಳು ವಿದ್ಯುದೀಕರಿಸಲ್ಪಟ್ಟಿವೆ’ ಎಂದೊಡನೆ ಅಲ್ಲಿನ ಎಲ್ಲ ನಿವಾಸಿಗಳು ವಿದ್ಯುತ್ ಪಡೆದಿದ್ದಾರೆಂದು ಅರ್ಥವಲ್ಲ. ವಿದ್ಯುತ್ ಸಚಿವಾಲಯವು ಒಂದು ಗ್ರಾಮವನ್ನು ವಿದ್ಯುದೀಕರಿಸಲ್ಪಟ್ಟಿದೆಯೆಂದು ಘೋಷಿಸಲು ಅಲ್ಲಿನ ಕೇವಲ ಶೇ.10ರಷ್ಟು ಮನೆಗಳಿಗೆ ವಿದ್ಯುತ್ ಪೂರೈಕೆಯಾಗಿದ್ದರೆ ಸಾಕೆಂದು 2015ರಲ್ಲಿ ಫ್ಯಾಕ್ಟ್‌ಚೆಕ್ಕರ್ ವರದಿ ಮಾಡಿತ್ತು.





