ರಿಯೋದಲ್ಲಿ ವ್ಯವಸ್ಥೆ ಚೆನ್ನಾಗಿತ್ತು: ಕವಿತಾ ರಾವುತ್

ಹೊಸದಿಲ್ಲಿ, ಆ.25: ‘‘ ನಾವು ಜೈಶಾ ಅವರ ವಿವಾದದಲ್ಲಿ ಭಾಗಿಯಾಗಲು ಇಚ್ಛಿಸುವುದಿಲ್ಲ.ಆದರೆ ಮ್ಯಾರಥಾನ್ ದಾರಿಯ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ನನಗೆ ಸಮಸ್ಯೆ ಕಂಡುಬರಲಿಲ್ಲ. ಆದ ಕಾರಣ ವ್ಯವಸ್ಥೆಯ ಬಗ್ಗೆ ನಾನ್ಯಾಕೆ ದೂರಲಿ’’ ಎಂದು ಜೈಶಾ ಜೊತೆಗೆ ರಿಯೋದಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಭಾರತದ ಓಟಗಾರ್ತಿ ಕವಿತಾ ರಾವುತ್ ಹೇಳಿದ್ದಾರೆ.
ಕವಿತಾ 2 ಗಂಟೆ 59 ನಿಮಿಷ ಮತ್ತು 29 ಸೆಕೆಂಡ್‌ಗಳಲ್ಲಿ 42 ಕಿ.ಮೀ ದೂರದ ಹಾದಿಯನ್ನು ಮುಟ್ಟಿದ್ದರು.
ಜೈಶಾ ಅವರು 89ನೆ ಸ್ಥಾನದೊಂದಿಗೆ ಗುರಿ ತಲುಪಿದ್ದರು. ಫಿನಿಶಿಂಗ್ ಲೈನ್‌ನಲ್ಲಿ ಕುಸಿದು ಬಿದ್ದಿದ್ದರು. ಬ್ರೆಝಿಲ್‌ನಿಂದ ತವರಿಗೆ ವಾಪಸಾಗುತ್ತಲೇ ಹೇಳಿಕೆ ನೀಡಿದ್ದ ಜೈಶಾ ಎಲ್ಲಾ ದೇಶಗಳ ಅಥ್ಲೀಟ್‌ಗಳಿಗೂ ಆಯಾ ದೇಶಗಳ ಸಮಿತಿಯು ಪ್ರತಿ 2 ಕಿ.ಮಿ. ದಾರಿಯಲ್ಲಿ ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಿತ್ತು. ಆದರೆ ಭಾರತದ ವತಿಯಿಂದ ಅಂತಹ ವ್ಯವಸ್ಥೆ ಇರಲಲ್ಲ ಎಂದು ಜೈಶಾ ಅವರು ದೂರಿದ್ದರು.
ರಿಯೋ ಒಲಿಂಪಿಕ್ಸ್ ಮ್ಯಾರಥಾನ್ ಓಟದ ಸಮಯದಲ್ಲಿ ಕುಡಿಯಲು ನೀರು ಕೊಡಲು ಭಾರತದ ಯಾರೂ ಇರಲಿಲ್ಲ.ತನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು ಎಂದು ಜೈಶಾ ಆರೋಪ ಮಾಡಿದ್ದರು.
ಎಎಫ್‌ಐ ಅಧಿಕಾರಿಗಳು ಓಟದ ಮುನ್ನಾದಿನ ಓಟದ ಸಂದರ್ಭದಲ್ಲಿ ನಿಮಗೆ ಇಷ್ಟದ ಪಾನೀಯದ ವ್ಯವಸ್ಥೆ ಮಾಡಬೇಕೆ ಎಂದು ಕೇಳಿದ್ದರು. ನನಗೆ ಅಂತಹ ಪಾನಿಯ ಬೇಕಾಗಿಲ್ಲವೆಂದು ಅವರಿಗೆ ಹೇಳಿರುವುದಾಗಿ ಕವಿತಾ ಮಾಹಿತಿ ನೀಡಿದ್ದಾರೆ.
‘‘ ಜೈಶಾ ತಲುಪಿದ 10 ನಿಮಿಷ ಬಳಿಕ ಫಿನಿಶಿಂಗ್ ಲೈನ್ ಮುಟ್ಟಿದೆ. ನಾನು ರೇಸ್ ಪೂರ್ಣಗೊಳಿಸಿದ ಬಳಿಕ ಬಟ್ಟೆ ಬದಲಾಯಿಸಲು ಕೋಣೆಗೆ ತೆರಳಿದೆ. ಆಗ ಜೈಶಾ ಅವರ ಕಿಟ್ ಬ್ಯಾಗ್ ಅಲ್ಲಿ ಬಿದ್ದಿತ್ತು. ಆಗ ನನಗೆ ಅನುಮಾನ ಉಂಟಾಯಿತು. 3,000 ಸ್ಟೀಪಲ್ ಚೇಸ್‌ನಲ್ಲಿ ನನ್ನೊಂದಿಗೆ ಸ್ಪರ್ಧಿಸಿದ್ದ ಸುಧಾ ಸಿಂಗ್ ಅವರನ್ನು ಕರೆದುಕೊಂಡು ಜೈಶಾರನ್ನು ಹುಡುಕಲು ಹೊರಟೆ. ಮುಖ್ಯ ಕೋಚ್‌ರನ್ನು ಭೇಟಿಯಾದಾಗ ಜೈಶಾ ಕುಸಿದು ಬಿದ್ದು ಚಿಕಿತ್ಸೆ ಪಡೆಯುತ್ತಿರುವ ವಿಚಾರ ಗೊತ್ತಾಯಿತು ’’ ಎಂದು ಕವಿತಾ ಅಂದಿನ ಘಟನೆಯ ಬಗ್ಗೆ ವಿವರಿಸಿದರು.
ಜೈಶಾ ಅವರು ಕುಸಿದು ಬಿದ್ದಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅಲ್ಲಿನ ಡಾಕ್ಟರ್ ಮತ್ತು ಜೈಶಾರ ವೈಯಕ್ತಿಕ ಕೋಚ್ ನಿಕೊಲಾಯ್ ಸ್ನೇಸಾರವ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಕಾರಣದಿಂದಾಗಿ ಸ್ಥಳೀಯ ಪೊಲೀಸರು ಕೋಚ್ ನಿಕೊಲಾಯ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆಗಾಗಿ ಅರ್ಧದಿನಗಳ ಕಾಲ ಪೊಲೀಸ್ ಠಾಣೆಯಲ್ಲಿರಿಸಿದ್ದರು’’ ಎಂದು ಕವಿತಾ ರಾವುತ್ ಹೇಳಿದ್ದಾರೆ.
,,,,,,,,,





