ದುಲೀಪ್ ಟ್ರೋಫಿ: ಗೆಲುವಿನ ಹಾದಿಯಲ್ಲಿ ಇಂಡಿಯಾ ರೆಡ್
ಮುಕುಂದ್ ಭರ್ಜರಿ ಶತಕ, ಕುಲ್‌ದೀಪ್‌ಗೆ 5 ವಿಕೆಟ್

ಗ್ರೇಟರ್ ನೊಯ್ಡ, ಆ.25: ಆರಂಭಿಕ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್ ಬಾರಿಸಿದ ಆಕರ್ಷಕ ಶತಕ(169 ರನ್), ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗುರುಕೀರತ್ ಸಿಂಗ್(82 ರನ್) ಅರ್ಧಶತಕ ಹಾಗೂ ಕುಲ್‌ದೀಪ್ ಯಾದವ್(5-55) ಅಮೋಘ ಬೌಲಿಂಗ್‌ನ ನೆರವಿನಿಂದ ಇಂಡಿಯಾ ರೆಡ್ ತಂಡ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಗ್ರೀನ್ ತಂಡದ ವಿರುದ್ಧ ಗೆಲುವಿನ ಹಾದಿಯಲ್ಲಿದೆ.
ಗೆಲುವಿಗೆ 497 ರನ್ ಕಠಿಣ ಸವಾಲು ಪಡೆದಿದ್ದ ಇಂಡಿಯಾ ಗ್ರೀನ್ ತಂಡ 3ನೆ ದಿನದಾಟದಂತ್ಯಕ್ಕೆ 46 ಓವರ್‌ಗಳಲ್ಲಿ 217 ರನ್‌ಗೆ 7 ವಿಕೆಟ್ ಕಳೆದುಕೊಂಡಿದೆ. ಅಂತಿಮ ದಿನವಾದ ಶುಕ್ರವಾರ ಗೆಲ್ಲಲು ಇನ್ನೂ 280 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಕುಲ್‌ದೀಪ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ 5 ವಿಕೆಟ್ ಗೊಂಚಲು ಪಡೆದರು.
ರಾಬಿನ್ ಉತ್ತಪ್ಪ 72 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಸುರೇಶ್ ರೈನಾ(42) ಕ್ರೀಸ್ ಕಾಯ್ದುಕೊಂಡಿದ್ದಾರೆ. ಸೌರವ್ ತಿವಾರಿ(31) ಎರಡಂಕೆ ದಾಟಿದರು. ಇದೇ ಮೊದಲ ಬಾರಿ ಪಿಂಕ್ ಚೆಂಡಿನಲ್ಲಿ ಹಗಲು-ರಾತ್ರಿ ನಡೆಯುತ್ತಿರುವ ನಾಲ್ಕುದಿನಗಳ ದುಲೀಪ್ ಟ್ರೋಫಿ ಪಂದ್ಯದ ಮೂರನೆ ದಿನವಾದ ಗುರುವಾರ 3 ವಿಕೆಟ್ ನಷ್ಟಕ್ಕೆ 344 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಇಂಡಿಯಾ ರೆಡ್ ತಂಡ ಸ್ಪಿನ್ನರ್ ಶ್ರೇಯಸ್ ಗೋಪಾಲ್(5-123) ದಾಳಿಗೆ ಸಿಲುಕಿ 116.5 ಓವರ್‌ಗಳಲ್ಲಿ 486 ರನ್‌ಗೆ ಆಲೌಟಾಯಿತು. ಆದರೆ, ಇಂಡಿಯಾ ಗ್ರೀನ್ ತಂಡಕ್ಕೆ ಕಠಿಣ ಗುರಿ ನೀಡಲು ಯಶಸ್ವಿಯಾಯಿತು.
ಸುದೀಪ್ ಚಟರ್ಜಿ(114) ಅವರೊಂದಿಗೆ 2ನೆ ವಿಕೆಟ್‌ಗೆ 240 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಮುಕುಂದ್ ಆ ಬಳಿಕ 4ನೆ ವಿಕೆಟ್‌ಗೆ ಗುರುಕೀರತ್‌ರೊಂದಿಗೆ 70 ರನ್ ಸೇರಿಸಿ ತಂಡವನ್ನು ಆಧರಿಸಿದರು.
ತಂಡದ ಪರ ಗರಿಷ್ಠ ಸ್ಕೋರ್(169 ರನ್, 221 ಎಸೆತ, 20 ಬೌಂಡರಿ) ದಾಖಲಿಸಿದ್ದ ಮುಕುಂದ್‌ಗೆ ವೇಗದ ಬೌಲರ್ ಅಶೋಕ್ ದಿಂಡಾ ಪೆವಿಲಿಯನ್ ಹಾದಿ ತೋರಿಸಿದರು.
ತಂಡದ ಮೊತ್ತವನ್ನು 425 ರನ್‌ಗೆ ತಲುಪಿಸಿದ ಗುರುಕೀರತ್(82 ರನ್, 96ಎಸೆತ, 13 ಬೌಂಡರಿ, 1 ಸಿಕ್ಸರ್) ಕರ್ನಾಟಕದ ಸ್ಪಿನ್ನರ್ ಎಸ್.ಗೋಪಾಲ್‌ಗೆ ವಿಕೆಟ್ ಒಪ್ಪಿಸಿದರು.
ಔಟಾಗದೆ 33 ರನ್ ಗಳಿಸಿದ ಅನುರೀತ್ ಸಿಂಗ್ ಇಂಡಿಯಾ ಗ್ರೀನ್ ತಂಡಕ್ಕೆ ಕಠಿಣ ಗುರಿ ನಿಗದಿಪಡಿಸಲು ತಂಡಕ್ಕೆ ನೆರವಾದರು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ರೆಡ್ ಪ್ರಥಮ ಇನಿಂಗ್ಸ್: 161
ಇಂಡಿಯಾ ಗ್ರೀನ್ ಪ್ರಥಮ ಇನಿಂಗ್ಸ್: 151
ಇಂಡಿಯಾ ರೆಡ್ ದ್ವಿತೀಯ ಇನಿಂಗ್ಸ್: 486/10
(ಮುಕುಂದ್ 169, ಸಂದೀಪ್ ಮುಖರ್ಜಿ 114, ಗುರುಕೀರತ್ 82, ಎಸ್.ಗೋಪಾಲ್ 5-123, ಓಜಾ 2-58)
ಇಂಡಿಯಾ ಗ್ರೀನ್ ದ್ವಿತೀಯ ಇನಿಂಗ್ಸ್: 46 ಓವರ್‌ಗಳಲ್ಲಿ 217/7
(ರಾಬಿನ್ ಉತ್ತಪ್ಪ 72, ಸುರೇಶ್ ರೈನಾ ಔಟಾಗದೆ 42, ಕುಲದೀಪ್ ಯಾದವ್ 5-55)







