ಮೊಟ್ಟೆಸೆತ ಪುರಾಣ

ಇದು ಇಂದು ನಿನ್ನೆಯದ್ದಲ್ಲ. ಮೊಟ್ಟೆ ಎಸೆತಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಕ್ರಿಸ್ತಶಕ 63 ರಲ್ಲಿ ಇಂಗ್ಲೆಂಡಿಗರಿಂದ ರೋಮನ್ ಗವರ್ನರ್ ವಿರುದ್ಧ ಪ್ರಾರಂಭಗೊಂಡ ಮೊಟ್ಟೆ ಎಸೆತ ಪ್ರತಿಭಟನೆ ಮಾಜಿ ಸಂಸದೆ ರಮ್ಯಾ ತನಕ ಮಂಗಳೂರಿನಲ್ಲಿ ತಂದು ನಿಲ್ಲಿಸಿದೆ. ಸೆಲೆಬ್ರಿಟಿಗಳ, ರಾಜಕಾರಣಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಪ್ರಯೋಗ ಮಾಡುವ ದುಷ್ಕರ್ಮಿಗಳು ಬೇರೇನೂ ಮಾಡಲಾಗದೆ ತಮ್ಮ ಅಸಹಾಯಕತೆಯನ್ನು ಈ ರೀತಿಯ ಅಸ್ತ್ರದ ಮೂಲಕ ತೀರಿಸಿಬಿಡುತ್ತಾರೆ.
ಮೊಟ್ಟೆ ಎಸೆತ ಪ್ರಯೋಗ 18 ನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟಿತು. ಅಂತಾರಾಷ್ಟ್ರ ಮಟ್ಟದ ದೊಡ್ಡ ದೊಡ್ಡ ವಿವಿಐಪಿ ದಿಗ್ಗಜರು ಮೊಟ್ಟೆಯ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಹೆಚ್ಚಾಗಿ ಪರಿಣಾಮ ಬೀರಿರುವುದು ರಾಜಕಾರಣಿಗಳ ಮೈಮೇಲೆ ಅಥವಾ ಅವರ ವಾಹನಗಳ ಮೇಲೆ. ರಮ್ಯಾ ಅವರ ಕಾರು ಏನು ಮಹಾ. ಭಾರತದ ಪ್ರಧಾನಿ ಮೋದಿ, ಜೇಟ್ಲಿ ಪೋಸ್ಟರ್ ಗೆ ಕೊಳೆತ ಮೊಟ್ಟೆ ಬಿದ್ದಿದೆ. ಇತ್ತೀಚೆಗೆ ಬಿಜೆಪಿಯ ಸುಬ್ರಹ್ಮಣಿಯನ್ ಕಾರಿಗೆ ಮೊಟ್ಟೆ ಎಸೆದದ್ದು ನೆನಪಿರಬಹುದು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಗೂ ಮೊಟ್ಟೆಯ ಹೊಡೆತ ಸಿಕ್ಕಿದೆ. ಚಿತ್ರನಟ ಕಿರಣ್ ಖೇರ್ ಮೊಟ್ಟೆ ಪ್ರತಿಭಟನೆಯ ಕಾವಿಗೆ ತುತ್ತಾದವರೇ. ಪ್ರಸ್ತುತ ಕನ್ನಡ ಚಿತ್ರನಟಿ, ಮಾಜಿ ಸಂಸದೆ ರಮ್ಯಾ ಸರದಿ ಅಷ್ಟೆ.
ಆಸ್ಟ್ರೇಲಿಯಾದಲ್ಲಿ ಶತಮಾನೋತ್ಸವ; 1917 ನವಂಬರ್ 29 ರಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಾರ್ವಿಕ್ ರೈಲ್ವೇ ಸ್ಟೇಶನ್ ನಲ್ಲಿ ಅಂದಿನ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಬಿಲ್ಲಿ ಹ್ಯೂಜ್ಸ್ ಕ್ಯಾಂಪೇನ್ ನಡೆಸುತ್ತಿದ್ದಾಗ ಅವರ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಪ್ರಧಾನಿ ಅವರ ಮಿಲಿಟರಿಗೆ ಸಂಬಂಧಿಸಿದ ತೀರ್ಮಾನದ ವಿರುದ್ಧ ವಿರೋಧಿಗಳು ಈ ಪ್ರತಿಭಟನೆ ನಡೆಸಿದ್ದರು. ವಿಶೇಷವೆಂದರೆ ಆ ಘಟನೆ ಇಂದಿಗೂ ಜೀವಂತವಾಗಿದೆ. 2007 ನವಂಬರ್ 29 ರಂದು ಪ್ರಧಾನಿಗೆ ಮೊಟ್ಟೆ ಎಸೆದ 90ನೇ ವರ್ಷವನ್ನು ಸೆಲೆಬ್ರೇಟ್ ಮಾಡಲಾಗಿತ್ತು. ಬರುವ 2017 ರಲ್ಲಿ ಶತಮಾನೋತ್ಸವದ ವರ್ಷ!
70,000 ಡಾಲರ್ ಪರಿಹಾರ ತೆತ್ತರು; ಪರ್ತ್ ನ ಕೋಟೆಸ್ಲೋ ಬೀಚ್ ಹೋಟೆಲ್ ನಲ್ಲಿ ಪ್ರೇಮಿಗಳು ಕಾರು ಹತ್ತುತ್ತಿದ್ದಾಗ ಮೇಲಿಂದ ಮೊಟ್ಟೆ ಎಸೆಯಲಾಯಿತು. ಇದು 2008 ರಲ್ಲಿ ನಡೆದ ಘಟನೆ. ಇದರ ಪರಿಣಾಮ ಪ್ರಿಯತಮೆಯ ಒಂದು ಕಣ್ಣಿಗೆ ಗಾಯವಾಗಿ ಆಸ್ಪತ್ರೆ ಸೇರಿದಳು. ಕೇಸು ಕೋರ್ಟ್ ಪಡಸಾಲೆಗೆ ಬಂತು. ಆರೋಪಿಗಳಿಗೆ ಜಡ್ಜ್ 70,357.50 ಡಾಲರ್ ಪರಿಹಾರ ನೀಡಲು ಆದೇಶಿಸಿದರು!
ಪ್ರತಿಭಟನೆಯ ಕಾವು ಗೆ ಕೇವಲ ಮೊಟ್ಟೆ ಮಾತ್ರವಲ್ಲ. ಟೊಮೆಟೋ ಎಸೆದ ಪ್ರಕರಣವೂ ಇದೆ. ಈಗೀಗ ಅದು ಗಂಭೀರ ಸ್ವರೂಪ ಪಡೆದು ಶೂ, ಚಪ್ಪಲಿ ಎಸೆತದ ತನಕ ಬಂದು ನಿಂತಿದೆ. ಕಲ್ಲು ತೂರಾಟ ಕೂಡಾ ಸಾಮಾನ್ಯವಾಗಿ ಬಿಟ್ಟಿದೆ. ಅಷ್ಟೆಲ್ಲಾ ಯಾಕೆ? ನಮ್ಮ ಕರ್ನಾಟಕ ವಿಧಾನಸೌಧದಲ್ಲಿ, ಕೇರಳ ಅಸಂಬ್ಲಿಯಲ್ಲಿ ಮಂತ್ರಿ ಮಹೋದಯರೇ ಪರಸ್ಪರ ಕುರ್ಚಿ, ಪೀಠೋಪಕರಣಗಳನ್ನು ಎಸೆಯಲಿಲ್ಲವೇ. ದೆಹಲಿ ಸಂಸತ್ ನಲ್ಲೂ ಕೋಲಾಹಾಲವಾಗಿಲ್ಲವೇ?
ಮೊಟ್ಟೆ, ಟೊಮೆಟೋ ಎಸೆತ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತ ಅಂತ ತಿಳ್ಕೊಂಡರೆ ತಪ್ಪು. ವಿದೇಶದಲ್ಲಿ ಟೊಮೆಟೋ, ಮೊಟ್ಟೆ ಎಸೆಯುವ ಬೃಹತ್ ಸ್ಪರ್ಧೆ, ಉತ್ಸವ ನಡೆಯುತ್ತಿದೆ. ಅಲ್ಲಿ ಟೊಮೆಟೋ, ಮೊಟ್ಟೆಯ ಓಕುಳಿಯೇ ಹರಿಯುತ್ತದೆ. ಅಷ್ಟೇಕೆ ಇತ್ತೇಚಿನ ದಿನಗಳಲ್ಲಿ ಮೊಟ್ಟೆ ಎಸೆಯುವ ಆನ್ ಲೈನ್ ಗೇಮ್ಸ್ ಕೂಡಾ ಪ್ರಸಿದ್ಧಿ ಪಡೆದಿದೆ. ಅಂತೂ ಈ ಮೊಟ್ಟೆ ಎಂಬುವುದು ಕೇವಲ ಸಂತಾನ ಅಭಿವೃದ್ಧಿ ಮಾಡಲು, ಆಹಾರವಾಗಿಸಲು ಉಪಯೋಗಿಸುವುದಲ್ಲ. ಪ್ರತಿಭಟನೆ, ಸ್ಪರ್ಧೆ, ಉತ್ಸವಕ್ಕೂ ಬೇಕು ಅಂತಾಯ್ತು. ಇಷ್ಟೇಕೆ ಇದಕ್ಕಿಂತಲೂ ಕುತೂಹಲವಾದ ಮತ್ತೊಂದು ವಿಷಯವಿದೆ. ಹುಷಾರಾಗಿರಿ! ಮೊಟ್ಟೆಯನ್ನು ಮಾಟ ಮಂತ್ರ ತಂತ್ರಕ್ಕೂ ಬಳಸುತ್ತಾರೆ.







