ಇಟಲಿ ಭೂಕಂಪ: ಕಟ್ಟಡ ಅವಶೇಷಗಳಡಿ ಜೀವಂತ ಪತ್ತೆಯಾದ ಬಾಲಕಿ!

ರೋಮ್, ಆ.26: ಮಧ್ಯ ಇಟಲಿಯಲ್ಲಿ ಭೀಕರ ಭೂಕಂಪ ಸಂಭವಿಸಿ 18 ಗಂಟೆಗಳು ಕಳೆದ ಬಳಿಕ ಕಟ್ಟಡಗಳ ಅವಶೇಷಗಳ ಅಡಿಯಿಂದ 10ರ ಬಾಲಕಿಯನ್ನು ಜೀವಂತವಾಗಿ ಹೊರ ತೆಗೆಯಲಾಗಿದೆ. ಭೀಕರ ಭೂಕಂಪದಲ್ಲಿ ಪವಾಡಸದೃಶವಾಗಿ ಪಾರಾದ ಶಾಲಾ ಬಾಲಕಿಯನ್ನು ಗಿಯುಲಿಯಾ ಎಂದು ಗುರುತಿಸಲಾಗಿದೆ.
ರಕ್ಷಣಾಪಡೆಗಳು ಹಾಗೂ ಕಾರ್ಯಕರ್ತರು ಪೆಸ್ಕಾರ ಡೆಲ್ ಟ್ರೊಂಟೊ ಎಂಬ ಪಟ್ಟಣದಲ್ಲಿ ಬಾಲಕಿಯನ್ನು ಬುಧವಾರ ತಡರಾತ್ರಿ ಜೀವಂತವಾಗಿ ಹೊರ ತೆಗೆದಿದ್ದಾರೆ. ರಿಕ್ಟರ್ ಮಾಪಕದಲ್ಲಿ 6 ರಿಂದ 6.2ರಷ್ಟು ತೀವ್ರತೆ ಹೊಂದಿದ್ದ ಭೂಕಂಪದಲ್ಲಿ ಈಗಾಗಲೇ ಕನಿಷ್ಠ 241 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ.
ಪೆಸ್ಕಾರ ಡೆಲ್ ಟ್ರೊಂಟೊ ಹಾಗೂ ಅಮಟ್ರೈಸ್ ಸಹಿತ ಹಲವು ಪರ್ವತಗಳಿಂದ ಆವೃತವಾಗಿರುವ ಪಟ್ಟಣಗಳು ಭೂಕಂಪದಿಂದ ಹೆಚ್ಚು ಹಾನಿಗೊಳಗಾಗಿವೆ. ಭೂಕುಸಿತದ ಭೀತಿಯ ನಡುವೆಯೂ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ರಕ್ಷಣಾಕಾರ್ಯಾಚರಣೆ ಪಡೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಗುರುವಾರ ಕ್ಯಾಬಿನೆಟ್ ಸಭೆ ಕರೆದಿರುವ ಇಟಲಿ ಪ್ರಧಾನಿ ಮತ್ತೆವೊ ರೆಂಝಿ ಭೂಕಂಪದಿಂದ ಬಾಧಿತ ಪ್ರದೇಶಗಳಿಗೆ ಪರಿಹಾರ ನೀಡಲು ಸಮ್ಮತಿ ಸೂಚಿಸಿದ್ದಾರೆ.







