ನಟ ದರ್ಶನ್ ಮನೆ ತೆರವು ಖಚಿತ
ರಾಜಕಾಲುವೆ ಒತ್ತುವರಿ ಪ್ರಕರಣ

ಬೆಂಗಳೂರು, ಆ.26: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡ ಚಿತ್ರನಟ ದರ್ಶನ್ ಮನೆ ಪ್ರದೇಶದಲ್ಲಿ ರಾಜಕಾಲುವೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಶೀಘ್ರವೇ ತೆರವು ಕಾರ್ಯಾಚರಣೆ ನಡೆಸಲಿದೆ ಎನ್ನಲಾಗಿದೆ.
ಬಿಬಿಎಂಪಿ ಮೂಲ ನಕ್ಷೆಯ ಪ್ರಕಾರ ದರ್ಶನ್ ಅವರ ನಿವಾಸವಿರುವ ಜಾಗದಲ್ಲಿ ರಾಜಕಾಲುವೆ ಇದ್ದು, ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ದರ್ಶನ ಅವರ ಮನೆಯ ಪ್ರವೇಶ ದ್ವಾರದಲ್ಲಿ ರಾಜಕಾಲುವೆ ಹಾದು ಹೋಗಿದೆ ಎಂದು ಬೆಂಗಳೂರು ಮೇಯರ್ ಮಂಜುನಾಥ್ ರೆಡ್ಡಿ ಮಾಹಿತಿ ನೀಡಿದ್ದಾರೆ.
‘‘ದರ್ಶನ್ ಮನೆ ವಿವಾದಿತ ಸ್ಥಳದಲ್ಲಿರುವ ಬಗ್ಗೆ ಅನುಮಾನವಿದೆ. ಹೀಗಾಗಿ ಸರ್ವೇಕಾರ್ಯ ನಡೆಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ಸರ್ವೇ ಇಲಾಖೆ ತಮಗೆ ವರದಿ ನೀಡಿದ ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸುವುದು ನಿಶ್ಚಿತ. ಅಕ್ರಮ ಎಂದು ಕಂಡು ಬಂದರೆ ತಕ್ಷಣವೇ ತೆರವುಗೊಳಿಸುತ್ತೇವೆ’’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.





