ಕುಂಬ್ರ ಪೇಟೆಯಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧ

ಪುತ್ತೂರು, ಆ.26: ಸಾರ್ವಜನಿಕರಿಗೆ ತೊಂದರೆ ಹಾಗೂ ಟ್ರಾಫಿಕ್ ಸಮಸ್ಯೆಗಳಾಗುವ ಹಿನ್ನೆಲೆಯಲ್ಲಿ ಮಾಣಿ- ಮೈಸೂರು ಹೆದ್ದಾರಿ ವ್ಯಾಪ್ತಿಯಲ್ಲಿರುವ ಒಳಮೊಗ್ರು ಗ್ರಾಮದ ಕುಂಬ್ರ ಪೇಟೆಯಲ್ಲಿ ಸಾರ್ವಜನಿಕ ಸಭೆೆ, ಸಮಾರಂಭ ಹಾಗೂ ಯಾವುದೇ ರೀತಿಯ ಪ್ರತಿಭಟನಾ ಸಭೆ ನಡೆಸದಂತೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ. ಕುಂಬ್ರ ಅಶ್ವಥ ಕಟ್ಟೆಯ ಎರಡೂ ಬದಿಗಳಲ್ಲಿ ರಸ್ತೆ ಹಾದು ಹೋಗುವ ಕಾರಣ ಕಟ್ಟೆಯ ಬಳಿ ಸಭಾ ಕಾರ್ಯಕ್ರಮ ನಡೆಸಿದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಮತ್ತು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಂಪ್ಯ ಗ್ರಾಮಾಂತರ ಠಾಣೆ ಎಸ್ಸೈ ಅಬ್ದುಲ್ ಖಾದರ್ ಗುರುವಾರ ಕುಂಬ್ರದಲ್ಲಿ ಈ ಕುರಿತು ಗ್ರಾಪಂ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಬೇರೆ ಸ್ಥಳವನ್ನು ಗ್ರಾಪಂ ನಿಗದಿಮಾಡುವಂತೆ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಗ್ರಾಪಂ ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಸ್ಥಳಾವಕಾವಿದ್ದು, ಅಲ್ಲೇ ಅವಕಾಶ ನೀಡುವುದಾಗಿ ಹೇಳಿದರು.
ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೆ ಪ್ರತಿಭಟನೆಯ ಎಚ್ಚರಿಕೆ
ಕುಂಬ್ರದ ಅಶ್ವಥ ಕಟ್ಟೆಗೆ ತನ್ನದೇ ಆದ ಇತಿಹಾಸವಿದೆ. ಅನಾದಿ ಕಾಲದಿಂದಲೂ ಇಲ್ಲಿ ದೈವಗಳ ಸೇವೆ, ಚೌತಿ ಹಾಗೂ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತವೆ. ಕಟ್ಟೆಯ ಬಳಿ ಸಬೆಸಮಾರಂಭ ನಡೆಸಬಾರದು ಎಂದು ಹೇಳುವ ಹಕ್ಕು ಪೊಲೀಸರಿಗಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ಪೊಲೀಸ್ ಇಲಾಖೆಗಾಗಲಿ, ಗ್ರಾಪಂಗಾಗಲಿ ಇಲ್ಲ. ಕಟ್ಟೆಯ ಬಳಿ ನಡೆಯುವ ಕಾರ್ಯಕ್ರಮ ಯಥಾವತ್ತಾಗಿ ನಡೆಯಲಿದೆ. ಅಡ್ಡಿಪಡಿಸಿದಲ್ಲಿ ಪ್ರತಿಭಟನೆಯನ್ನು ನಡೆಬೇಕಾಗುತ್ತದೆ ಎಂದು ಮಾಜಿ ಗ್ರಾಪಂ ಸದಸ್ಯ ನ್ಯಾಯವಾದಿ ದುರ್ಗಾಪ್ರಸಾದ್ ರೈ ಎಚ್ಚರಿಕೆ ನೀಡಿದ್ದಾರೆ







