ತಮಿಳ್ನಾಡು: ಸಹೋದ್ಯೋಗಿ ಮಹಿಳೆಗೆಆ್ಯಸಿಡ್ ಎರಚಿದಾತನ ಬಂಧನ

ಚೆನ್ನೈ,ಆಗಸ್ಟ್ 26: ಸಹೋದ್ಯೋಗಿ ಮಹಿಳೆಗೆ ಆ್ಯಸಿಡ್ ಎರಚಿ ಗಂಭೀರವಾಗಿ ಗಾಯಗೊಳಿಸಿದ್ದ ಮಾಜಿ ಆದಾಯತೆರಿಗೆ ಉದ್ಯೋಗಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿ ಜಿ.ಪ್ರಭು ಎಂಬಾತನನ್ನು ನಿನ್ನೆ ಪೊಲೀಸರು ಬಂಧಿಸಿದ್ದು, ತನ್ನ ಸಹೋದ್ಯೋಗಿಯಾದ ಮೋಹಿತ್ ಪಥಕ್ ಎಂಬ ಮಹಿಳೆಗೆ ಈತ ಆ್ಯಸಿಡ್ ಎರಚಿದ್ದ ಎಂದು ವರದಿಯೊಂದು ತಿಳಿಸಿದೆ.
ಆದಾಯ ತೆರಿಗೆ ವಿಭಾಗದಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕೆಲಸಕ್ಕೆ ಭರ್ತಿಯಾಗಿದ್ದ ಈತ ಮಹಿಳೆಯನ್ನು ಪ್ರೀತಿಸುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಈ ಕೆಲಸವನ್ನು ತೊರೆದು ಇಲೆಕ್ಟ್ರಿಕ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಮಹಿಳೆ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂದು ಅನಿಸಿದ್ದರಿಂದ ಆಕೆಗೆ ಆ್ಯಸಿಡ್ ಎರಚಿದೆ ಎಂದು ಆತ ಹೇಳಿದ್ದಾನೆ.ಈ ಕೃತ್ಯವೆಸಗಲು ಆತನಿಗೆ ಗೆಳೆಯನೊಬ್ಬ ಸಹಕರಿಸಿದ್ದ. ಪೊಲೀಸರು ಆತನ ಗೆಳೆಯನನ್ನು ಈವರೆಗೂ ಬಂಧಿಸಲು ಯಶಸ್ವಿಯಾಗಿಲ್ಲ. ಅಣ್ಣಾನಗರದ ಪ್ಲಾಟೊಂದರಲ್ಲಿ ಮಧ್ಯಪ್ರದೇಶದವಳಾದ ಮಹಿಳೆಗೆ ಈತ ಆ್ಯಸಿಡ್ ಎರಚಿದ್ದು ಶೇ. 40ರಷ್ಟು ಸುಟ್ಟಗಾಯಗಳಾಗಿರುವ ಮಹಿಳೆ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.





