92 ಪೈಸೆಗೆ 10 ಲಕ್ಷ ರೂಪಾಯಿಯ ರೈಲು ಪ್ರಯಾಣ ವಿಮೆ
ಕೇಂದ್ರ ಸರ್ಕಾರದಿಂದ ಹೊಸ ಯೋಜನೆ

ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಶುಭ ಸುದ್ದಿ. ಕೇವಲ ಒಂದು ರೂಪಾಯಿಗಿಂತಲೂ ಕಡಿಮೆ ಮೊತ್ತದ ವಿಮಾ ಕಂತು ಪಾವತಿಸಿ, 10 ಲಕ್ಷ ರೂಪಾಯಿಯ ರೈಲು ಪ್ರಯಾಣ ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆ ಆಗಸ್ಟ್ 31ರಿಂದ ಜಾರಿಗೆ ಬರಲಿದೆ.
ಐಆರ್‌ಸಿಟಿಸಿ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸುವಾಗ ಕೇವಲ 92 ಪೈಸೆ ಕಂತುಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕಳೆದ ವರ್ಷದ ರೈಲ್ವೆ ಬಜೆಟ್‌ನಲ್ಲಿ, ರೈಲು ಪ್ರಯಾಣಿಕರಿಗೆ ಐಚ್ಛಿಕ ವಿಮಾ ಯೋಜನೆಯನ್ನು ಘೋಷಿಸಿದ್ದರು. ಟಿಕೆಟ್ ಕಾಯ್ದಿರಿಸುವ ವೇಳೆಯೇ ಪ್ರಿಮಿಯಂ ತುಂಬುವ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ದರು.
ಈ ಹೊಸ ಸೌಲಭ್ಯ ಉಪನಗರ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಲಭ್ಯ ಇರುವುದಿಲ್ಲ. ಉಳಿದಂತೆ ಯಾವುದೇ ದರ್ಜೆಯಲ್ಲಿ ಪ್ರಯಾಣಿಸುವವರೂ ವಿಮಾಸೌಲಭ್ಯ ಪಡೆಯಬಹುದು. ಆರಂಭದಲ್ಲಿ ರೈಲುಗಳ ಆಧಾರದಲ್ಲಿ ಇದು ಜಾರಿಯಾಗಲಿದೆ. ಈ ಯೋಜನೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಹಾಗೂ ವಿದೇಶಿ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ. ದೃಢೀಕೃತ ಟಿಕೆಟ್, ಆರ್‌ಎಸಿ ಹಾಗೂ ವೆಯಿಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರೂ ಇದು ಲಭ್ಯ.
ರೈಲು ಪ್ರಯಾಣದ ವೇಳೆ ಅವಘಡ ಸಂಭವಿಸಿ ಪ್ರಯಾಣಿಕರು ಮೃತಪಟ್ಟರೆ ಅಥವಾ ಕಾಯಂ ಅಂಗವೈಕಲ್ಯಕ್ಕೆ ಒಳಗಾದರೆ 10 ಲಕ್ಷ ರೂಪಾಯಿ, ಭಾಗಶಃ ಅಂಗವೈಕಲ್ಯಕ್ಕೆ 7.5 ಲಕ್ಷ, 2 ಲಕ್ಷ ರೂಪಾಯಿವರೆಗೂ ಆಸ್ಪತ್ರೆ ದಾಖಲಾತಿ ವೆಚ್ಚ ನೀಡಲಾಗುತ್ತದೆ. ಇದರ ಜತೆಗೆ ಮೃತದೇಹವನ್ನು ಒಯ್ಯಲು 10 ಸಾವಿರ ರೂಪಾಯಿ ನೀಡಲಾಗುತ್ತದೆ. ಭಯೋತ್ಪಾದಕ ದಾಳಿ, ಡಕಾಯಿತಿ, ದೊಂಬಿ, ಶೂಟೌಟ್, ಬೆಂಕಿ ಆಕಸ್ಮಿಕ ಪ್ರಕರಣಗಳಿಗೂ ಇದು ಅನ್ವಯಿಸುತ್ತದೆ. ಆದರೆ ಟಿಕೆಟ್ ರದ್ದುಪಡಿಸಿದರೆ, ಪ್ರಿಮಿಯಂ ಹಣ ಮರುಪಾವತಿ ಇರುವುದಿಲ್ಲ.
ಈ ಯೋಜನೆಯನ್ನು ಐಆರ್‌ಸಿಟಿಸಿಯು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್, ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಹಾಗೂ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಪಾಲುದಾರಿಕೆಯಲ್ಲಿ ಜಾರಿಗೊಳಿಸುತ್ತಿದೆ.







