ಮಂಗಳೂರಲ್ಲಿ ರಮ್ಯಾ ಪಾರಮ್ಯ!
ಮೊಟ್ಟೆಸೆತದ ಹಿಂದಿನ ರಹಸ್ಯ ಗೊತ್ತೇ?

ಇದರ ಹಿಂದೆ ಹಿಡನ್ ರಾಜಕೀಯ ಇದೆ ಅಂತ ಸ್ನೇಹಿತರೊಬ್ಬರು ತಿಳಿಸಿದ್ರು. ಒಂದು ಸಂಘಟನೆ ಅಂದಾಗ ಅದರೊಳಗೆ ಪರ ವಿರೋಧ ಅಭಿಪ್ರಾಯಗಳು ಸಹಜ. ಹಾಗೇನೇ ನಿನ್ನೆ ಕದ್ರಿಯಲ್ಲಿ ಸಂಘಟಕರು ಆಯೋಜಿಸಿದ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ ಎಂಬ ನೆಲೆಯಲ್ಲಿ ರಮ್ಯಾ ಅವರನ್ನು ಆಹ್ವಾನಿಸಲು ತೀರ್ಮಾನವಾಯಿತು. ಇದಕ್ಕೆ ಮತ್ತೊಂದು ತಂಡ ವಿರೋಧ ವ್ಯಕ್ತಪಡಿಸಿ ಸುದೀಪ್ ರನ್ನು ಕರೆಯಬೇಕೆಂದು ಪಟ್ಟು ಹಿಡಿಯಿತು. ಕಳೆದ ವರ್ಷ ರವಿಚಂದ್ರನ್ ಅತಿಥಿಯಾಗಿದ್ದರು. ಒಟ್ಟಾರೆ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ ರಂಗು ತರುವುದು ಉದ್ದೇಶವಾಗಿತ್ತೇ ವಿನಃ ಇಲ್ಲಿ ರಾಜಕೀಯ ಇರ್ಲಿಲ್ಲ. ಆದರೆ ವಿರೋಧಿ ಬಣಕ್ಕೆ ಇದು ಇರಿಸು ಮುರಿಸಾಯಿತು. ರಮ್ಯಾ ಒಂದು ಪಕ್ಷದ ಮಾಜಿ ಸಂಸದೆ ಅನ್ನೋದು ವಿರೋಧಿಗಳ ಕೋಪಕ್ಕೆ ಅಥವಾ ಸಂಕುಚಿತ ಮನೋಭಾವಕ್ಕೆ ಕಾರಣ.
ಏತನ್ಮಧ್ಯೆ ಮೊನ್ನೆ ರಮ್ಯಾ ಅವರ "ಪಾಕಿಸ್ಥಾನದಲ್ಲೂ ಒಳ್ಳೆಯವರಿದ್ದಾರೆ..." ಅನ್ನೋ ಹೇಳಿಕೆ ರಾಜ್ಯಾದ್ಯಂತ ಬಿಸಿಬಿಸಿ ಚರ್ಚೆಗೆ ಗ್ರಾಸವಾಯಿತು. ತದನಂತರ ಅದೇ ವಿಷಯಕ್ಕೆ ಪೂರಕವಾಗಿ ರಮ್ಯಾ ಅವರ "ನರಕ ಎಲ್ಲಿಲ್ಲ? ಮಂಗಳೂರಿನಲ್ಲೂ ಇಲ್ವೇ?" ಅನ್ನುವ ವಾಕ್ಯ ಆಕೆ ಅತಿಥಿ ಬೇಡವೆನ್ನುವವರಿಗೆ ಪುಷ್ಠಿ ಸಿಕ್ಕಂತಾಯಿತು. ಕಾರ್ಯಕ್ರಮಕ್ಕೆ ಬರುವುದರ ಬಗ್ಗೆ ಒಳಗೊಳಗೇ ಕುದಿಯುತ್ತಿದ್ದ ಸದಸ್ಯರಿಗೆ ರಮ್ಯಾ ನನ್ನು ವಿರೋಧಿಸಲು ಇದುವೇ ಅಸ್ತ್ರವಾಯಿತು. ಮೊಟ್ಟೆ ಎಸೆಯುವ ಮೂಲಕ ಸೇಡು ತೀರಿಸಿಯೇ ಬಿಟ್ಟರು. ಒಂದೇ ಕಲ್ಲಿಗೆ ಎರಡು ಹಣ್ಣು ಕೊಯ್ದರು.
ರಮ್ಯಾ ಅವರಿಗೆ ವಿವಾದ ಹೊಸತಲ್ಲ. ಈ ಪ್ರತಿಭಟನೆಯನ್ನು ಛಾಲೆಂಜ್ ಆಗಿ ತಗೊಂಡ ದಿಟ್ಟ ಮಹಿಳೆ ರಮ್ಯಾ ಸೂಕ್ಷ್ಮ ಪ್ರದೇಶ ಮಂಗಳೂರಿಗೆ ಬಂದೇ ಬಿಟ್ಟರು. ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಏರಿದರು. ಭಾಷಣ ಮಾಡಿದರು. ಇದನ್ನು ಸಹಿಸದ ವಿರೋಧಿಗಳು ಅಲ್ಲೂ ಮೊಟ್ಟೆ, ಕಲ್ಲಿನ ಮೊರೆ ಹೋದರೂ ರಮ್ಯಾ ಧೃತಿಗೆಡಲಿಲ್ಲ. ಆದರೆ ಗಲಾಟೆ ಬೇಡ, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಆಯೋಜಕರು ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿದರು. ಇಷ್ಟೆಲ್ಲಾ ಘಟನೆಯಿಂದ ಬೇಸರಿಸದ ರಮ್ಯಾ ನಗುಮೊಗದೊಂದಿಗೆ ಎಲ್ಲರೊಂದಿಗೆ ಬೆರೆತರು. ಮೊಟ್ಟೆ ನನಗಿಷ್ಟ ಅಂದರು. ಮಂಗಳೂರಿನ ಮೀನು ಸವಿದರು. ಉಡುಪಿಯ ಮಲ್ಲಿಗೆ ಮುಡಿದರು. ಮೈಸೂರ ಸಿಲ್ಕ್ ಸಾರಿ ಉಟ್ಟರು. ಕರಾವಳಿಯ ಆತಿಥ್ಯಕ್ಕೆ ಮನಸೋತರು. ರಮ್ಯಾ ಅವರ ಧೈರ್ಯ, ದಿಟ್ಟತನಕ್ಕೆ ಮಂಗಳೂರಿಗರು ಬೆರಗಾದರು. ಬಹುಷಃ ರಮ್ಯಾ ಕಾರ್ಯಕ್ರಮಕ್ಕೆ ಬಂದು ಸೈಲೆಂಟಾಗಿ ಹೋಗುತ್ತಿದ್ದರೆ ದೊಡ್ಡ ಸುದ್ದೀನೇ ಆಗ್ತಾ ಇರಲಿಲ್ಲ. ವಿಶೇಷವೇನೆಂದರೆ ಕರ್ನಾಟಕಕ್ಕೆ ಸೀಮಿತವಾಗಿದ್ದ ರಮ್ಯಾ ಇಂದು ಇಂಟರ್ ನ್ಯಾಷನಲ್ ಫಿಗರ್ ಆದರು. ಅವರನ್ನು ಅಷ್ಟೆತ್ತರಕ್ಕೆ ಕೊಂಡು ಹೋದವರು ಮಂಗಳೂರಿಗರೆಂಬ ಹೆಗ್ಗಳಿಕೆ ಇದೆ. ಬೇಸರದ ಸಂಗತಿಯೆಂದರೆ ಮಾಜಿ ಸಂಸದೆ, ಸೆಲೆಬ್ರಿಟಿಯೊಬ್ಬರಿಗೆ ಅವರದೇ ಪಕ್ಷದ ಸರಕಾರವಿದ್ದರೂ ಅವರ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಲು ಸಾಧ್ಯವಾಗದೇ ಇದ್ದುದು ಮಾತ್ರ ದುರಂತ.







