ಕಜ್ಜಿ ಹಿಡಿದು ಹುಳುವಾದ ಪುಟ್ಟ ಮಕ್ಕಳನ್ನು ಕೋಣೆಯೊಳಗೆ ಕೂಡಿಹಾಕಿ ಹೋದ ತಂದೆ ತಾಯಿ
.jpg)
ಹೊಸದಿಲ್ಲಿ,ಆಗಸ್ಟ್ 26: ಕೋಣೆಗೆ ಬಾಗಿಲು ಹಾಕಿ ಹೆತ್ತವರು ತೊರೆದುಹೋಗಿದ್ದ ಮೂರು ವರ್ಷ ಮತ್ತು ಎಂಟು ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ ಘಟನೆ ದಿಲ್ಲಿಯಿಂದ ವರದಿಯಾಗಿದೆ. ನೆರೆಮನೆಯವರು ನೀಡಿದ ಮಾಹಿತಿ ಪ್ರಕಾರ ಆಗಸ್ಟ್ 19ರಂದು ಪೊಲೀಸರು ಬಂದು ಬಾಗಿಲು ತೆರೆದಾಗ ಕೋಣೆಯೊಳಗೆ ಕಂಡು ಬಂದ ದೃಶ್ಯ ಹೃದಯ ವಿದ್ರಾವಕವಾಗಿತ್ತು ಎಂದು ವರದಿ ತಿಳಿಸಿದೆ. ಕತ್ತಲು ತುಂಬಿಕೊಂಡ ಆ ಕೋಣೆಯಲ್ಲಿದ್ದ ಮಕ್ಕಳಿಬ್ಬರಿಗೂ ಕಜ್ಜಿಯಾಗಿ ಹುಳುಗಳಾಗಿದ್ದವು. ಕಜ್ಜಿಯಿಂದ ದುರ್ವಾಸನೆ ಬರುತ್ತಿತ್ತು. ಮಕ್ಕಳಿಬ್ಬರು ನಿತ್ರಾಣರಾಗಿದ್ದರು. ನಂತರ ಪೊಲೀಸರು ಅವರಿಬ್ಬರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.
ಮಕ್ಕಳ ತಾಯಿ ಎರಡು ತಿಂಗಳ ಹಿಂದೆ ಸಹೋದರನ ಜತೆ ಮನೆ ತೊರೆದು ಹೋದವಳು ಮರಳಿ ಬಂದಿಲ್ಲ. ಮದ್ಯಪಾನಿಯಾದ ತಂದೆ ಆಗಸ್ಟ್ ಹದಿನೈದಕ್ಕೆ ಮನೆಯಿಂದ ಹೋದವನು ಇನ್ನೂ ಮರಳಿ ಬಂದಿಲ್ಲ. ಅಂದಿನಿಂದ ಈ ಮಕ್ಕಳು ಊಟ ನೀರಿಲ್ಲದೆ ಬಾಗಿಲು ಹಾಕಿದ್ದ ಕೋಣೆಯೊಳಗೆ ನಿಶ್ಶಕ್ತರಾಗಿ ನರಳುತ್ತಿದ್ದರು ಎನ್ನಲಾಗಿದೆ. ಪೊಲೀಸರಿಗೆ ಇನ್ನೂ ಮಕ್ಕಳ ತಂದೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.ಆದರೆ,ಮಕ್ಕಳ ಅಜ್ಜಿಯನ್ನು ಪೊಲೀಸರು ಪತ್ತೆಹಚ್ಚಿದ್ದು,ಆಕೆ ಮಕ್ಕಳ ಜವಾಬ್ದಾರಿಕೆಯನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಈಗ ಹೆಣ್ಣುಮಕ್ಕಳಿಬ್ಬರೂ ಬಾಲ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.







