ಲಂಚ ಕೊಟ್ಟವರಿಗೆ ಮಾತ್ರ ಕಡಬದಲ್ಲಿ 94ಸಿ ಹಕ್ಕುಪತ್ರ : ಆರೋಪ

ಪುತ್ತೂರು, ಆ.26: ಕಡಬ ಹೋಬಳಿಯಲ್ಲಿ 94ಸಿ ಹೆಸರಲ್ಲಿ ಅಧಿಕಾರಿಗಳು ಲಂಚಾವತಾರ ನಡೆಸುತ್ತಿದ್ದಾರೆ. ಅರ್ಹ ಫಲಾನುಭವಿಗಳನ್ನು ದುಡ್ಡಿಗಾಗಿ ಅಲೆದಾಡಿಸುತ್ತಾ ಹಣ ಕೊಟ್ಟವರಿಗೆ ಅರ್ಹತೆ ಇಲ್ಲದಿದ್ದರೂ ಸ್ಥಳ ಮಂಜೂರು ಮಾಡಿಕೊಟ್ಟದ್ದಾರೆ ಎಂದು ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಆರೋಪಿಸಿದ್ದಾರೆ.
ಅವರು ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2014ರಲ್ಲಿ 94ಸಿಗಾಗಿ ಅರ್ಜಿ ಸಲ್ಲಿಸಿಯೂ ಸ್ಥಳ ಮಂಜೂರಾಗದೆ ವಂಚಿತರಾದ ಮಹಿಳೆ ಕುಸುಮಾವತಿ ಇವರಿಗೆ 10 ದಿನಗಳ ಒಳಗಾಗಿ ನ್ಯಾಯ ಕೊಡದೇ ಇದ್ದರೆ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕಡಬ ಹೋಬಳಿಯ ಕೊಂಬಾರು, ನೆಟ್ಟಣ, ಬಿಳಿನೆಲೆ ಮೊದಲಾದ ಪ್ರದೇಶಗಳ ಜನತೆ 94 ಸಿ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಲಂಚದ ಆಸೆಯಿಂದ ಬಹಳಷ್ಟು ಮಂದಿಯ ಅರ್ಜಿಗಳನ್ನು ಪೆಂಡಿಂಗ್ ಇಟ್ಟದ್ದಾರೆ. ಲಂಚ ಕೊಟ್ಟವರಿಗೆ ಮಾತ್ರ ಸ್ಥಳ ಮಂಜೂರು ಗೊಳಿಸಿ ಹಕ್ಕುಪತ್ರ ನೀಡಲಾಗಿದೆ. ಕಡಬ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ 94 ಸಿ ಲಂಚ ಪಡೆಯಲು ದೊಡ್ಡ ಅವಕಾಶ ನೀಡಿದಂತಾಗಿದೆ ಎಂದು ಆರೋಪಿಸಿದರು.
ಚಾಲಕನೇ ಬ್ರೋಕರ್...!
ಕಡಬ ತಹಶೀಲ್ದಾರ್ ಕಚೇರಿಯಲ್ಲಿ ಚಾಲಕನಾಗಿರುವ ಉದಯಕುಮಾರ್ ಇದೀಗ 94ಸಿ ಯ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರಿಗೆ ಹಣ ಮಾಡಲು ಈತ ಸೂತ್ರಧಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಪ್ರತಿಯೊಂದು ವಿಚಾರದಲ್ಲೂ ಈತ ಈ ಅಧಿಕಾರಿಗಳಿಗೆ ಇಷ್ಟುಕೊಡಬೇಕು. ಅಷ್ಟು ಕೊಡಬೇಕು ಎಂದು ತಾಕೀತು ಮಾಡುವ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಆರೋಪಿಸಿದರು.
ಹಣ ಪಡೆದುಕೊಂಡು ಹಕ್ಕು ಪತ್ರ ನೀಡಿಲ್ಲ: ಕುಸುಮಾವತಿ
2014ರಲ್ಲಿ 94ಸಿಗಾಗಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಕುಸುಮಾವತಿ ಮಾತನಾಡಿ, ನಮಗೆ 35 ಸೆಂಟ್ಸ್ ಜಾಗ ಅಕ್ರಮಸಕ್ರಮದಲ್ಲಿ ಮಂಜೂರಾಗಿದೆ. ಉಳಿದ 89 ಸೆಂಟ್ಸ್ ಸ್ಥಳದಲ್ಲಿ ನಮ್ಮ ಮನೆಯಿದೆ. ಈ ಮನೆಯಡಿ ಸ್ಥಳವನ್ನು 94ಸಿ ಅಡಿಯಲ್ಲಿ ಮಂಜೂರುಗೊಳಿಸಲು ಅರ್ಜಿ ನಿಡಿದ್ದೇವೆ. ಅರ್ಜಿ ಮಂಜೂರುಗೊಳಿಸುವುದಾಗಿ ಭರವಸೆ ನೀಡಿ ಕಂದಾಯ ನಿರೀಕ್ಷಕರು ನನ್ನಿಂದ 2 ಸಾವಿರ ರೂ. ಪಡೆದುಕೊಂಡಿದ್ದಾರೆ. ಅಲ್ಲದೆ ತಹಶೀಲ್ದಾರರಿಗೆ ನೀಡಲೆಂದು ಚಾಲಕ ಉದಯ ಕುಮಾರ್ 2 ಸಾವಿರ ರೂ. ಪಡೆದುಕೊಂಡಿದ್ದಾರೆ. ಇದೀಗ ತನ್ನ ಪತಿಯ ಸಹೋದರರ ಆಕ್ಷೇಪ ಇದೆಯೆಂದು ಹೇಳಿ ಉದ್ದೇಶ ಪೂರ್ವಕವಾಗಿ ಇದನ್ನು ತಡೆ ಹಿಡಿಯಲಾಗುತ್ತಿದೆ. ಕುಟ್ರುಪ್ಪಾಡಿ ಗ್ರಾಮದ ವಾಸಿಯಾಗಿರುವ ನಾವು 94ಸಿಯಲ್ಲಿ ಅರ್ಜಿ ಸಲ್ಲಿಸಿದ್ದರೆ, ರೆಂಜಲಾಡಿ, ನೆಟ್ಟಣ ಹಾಗೂ ನೆಟ್ಟಣದಲ್ಲಿ ವಾಸ್ತವ್ಯವಿರುವ ತನ್ನ ಪತಿಯ ಸಹೋದರರು ಇದಕ್ಕೆ ಆಕ್ಷೇಪಣೆ ಹಾಕಿದ್ದಾರೆ. ನಿಮಗೆ ಸಂಬಂಧಿಕರ ಜೊತೆ ರಾಜಿ ಮಾಡಿಸುತ್ತೇನೆ. ನಂತರ ಹಕ್ಕುಪತ್ರ ನೀಡುವುದಾಗಿ ಎಂದು ತಹಶೀಲ್ದಾರ್ ಹೇಳುತ್ತಾರೆ. ಇವರು ನಮ್ಮ ಸಂಬಂಧಿಕರಾಗಿದ್ದರೂ ಇವರ್ಯಾರೂ ನಮ್ಮ ಜಾಗದ ಪಕ್ಕದಲ್ಲಿ ಇಲ್ಲ. ಹಾಗಿದ್ದರೂ ಸುಳ್ಳು ಆಕ್ಷೇಪಣೆ ಮಾಡಿದ್ದಾರೆ. ಇದಕ್ಕಾಗಿ ಮತ್ತು ನಾವು ಅವರು ಕೇಳಿದಷ್ಟು ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ನಮಗೆ ಹಕ್ಕುಪತ್ರ ನೀಡಿಲ್ಲ. ಹಕ್ಕು ಪತ್ರ ಸಿಗದ ಕಾರಣದಿಂದಾಗಿ ನಮಗೆ ಮಂಜೂರಾಗಿರುವ ಬಸವವಸತಿ ಯೋಜನೆಯ ಮನೆ ಕೂಡಾ ರದ್ದಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಕ್ಕುಪತ್ರ ವಂಚಿತ ಮಹಿಳೆ ಕುಸುಮಾವತಿ ಅವರ ಪತಿ ಮಣಿ ಎ.ಕೆ., ಅಳಿಯ ಗಣೇಶ್ ಉಪಸ್ಥಿತರಿದ್ದರು.







