ನಕಲಿ ಗೋರಕ್ಷಕರ ವಿರುದ್ಧ ಪ್ರಧಾನಿ ಹೇಳಿಕೆ ನಾಟಕ: ಕಾಂಗ್ರೆಸ್ ಆರೋಪ

ಪುತ್ತೂರು, ಆ.26: ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕರ ವಿರುದ್ಧ ನೀಡಿರುವ ಹೇಳಿಕೆಯು ನಾಟಕವಾಗಿದೆ. ಅವರು ಈ ಹೇಳಿಕೆ ನೀಡುವ ಮೂಲಕ ದೇಶದ ಜನತೆಯನ್ನು ವಂಚಿಸುವ ಕೆಲಸ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಟೀಕಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ನೀಡಿದ ಹೇಳಿಕೆ ಮತ್ತು ಮಹಾಸಭಾದ ಎಚ್ಚರಿಕೆ ನೀನು ಹೊಡೆದಂತೆ ಮಾಡು.. ನಾನು ಅತ್ತಂತೆ ಮಾಡುತ್ತೇನೆ ಎಂಬ ನಾಟಕ. ಇವರೆಲ್ಲ ಸೇರಿ ದೇಶದ ಜನತೆಯನ್ನು ವಂಚಿಸುತ್ತಿದ್ದಾರೆ ಎಂದರು.
ನಕಲಿ ಗೋರಕ್ಷಕರ ವಿರುದ್ಧ ಮೋದಿ ಎರಡೆರಡು ಬಾರಿ ಹೇಳಿಕೆ ನೀಡಿದರು. ಅವರ ಹೇಳಿಕೆಯ ನಂತರವೂ ಉಡುಪಿ ಸಮೀಪ ಪ್ರವೀಣ್ ಪೂಜಾರಿ ಎಂಬವರನ್ನು ನಕಲಿ ಗೋರಕ್ಷಕರು ಹತ್ಯೆ ಮಾಡಿದ್ದಾರೆ. ಈ ಮೂಲಕ ಅವರು ಮೋದಿ ಹೇಳಿಕೆಗೆ ಸವಾಲು ಹಾಕಿದ್ದಾರೆ. ಹಾಗಾದರೆ ಇಂಥವರನ್ನು ನಿಗ್ರಹಿಸಲು ಮೋದಿ ಏನು ಕ್ರಮ ಕೈಗೊಂಡಿದ್ದಾರೆ. ಗೋದ್ರೋತ್ತರ ಬೆಳವಣಿಗೆಗಳಿಂದಲೇ ಪ್ರಸಿದ್ಧಿ ಪಡೆದು ಮುಖ್ಯಮಂತ್ರಿಯಾದ ಮೋದಿ ಅದೇ ಅಜೆಂಡಾ ಮುಂದಿಟ್ಟುಕೊಂಡು ಪ್ರಧಾನಿಯೂ ಅದರು. ಈಗ ಇದ್ದಕ್ಕಿದ್ದಂತೆ ನಕಲಿ ಗೋರಕ್ಷಕರ ನೆನಪಾಗಿದ್ದು, ದಲಿತರ ಬದಲು ನನಗೆ ಗುಂಡು ಹಾಕಿ ಎಂದು ಹೇಳಿದ್ದೆಲ್ಲವೂ ಏನನ್ನೂ ತೋರಿಸುತ್ತದೆ? ಒಂದೋ ಅವರಿಗೆ ವಿಳಂಬ ಜ್ಞಾನೋದಯ ಆಗಿರಬೇಕು. ಜ್ಞಾನೋದಯ ನಿಜವೇ ಆಗಿದ್ದಲ್ಲಿ ಯಾವ ಸಿದ್ಧಾಂತ ತುಳಿದುಕೊಂಡೇ ಇಷ್ಟು ಮೇಲೆ ಬಂದರೋ ಅದೇ ಸಿದ್ಧಾಂತಕ್ಕೆ ಮತ್ತು ಅದನ್ನು ನಂಬಿದವರಿಗೆ ಮೋಸ ಮಾಡಿದ್ದಾರೆ ಎಂದ ಹಾಗಾಯಿತು. ಇದು ಎರಡೂ ಅಲ್ಲ, ಕೇವಲ ತೋರಿಕೆಗಾಗಿ ಈ ಹೇಳಿಕೆ ನೀಡುತ್ತಿದ್ದಾರೆ ಎಂದರೆ ದೇಶದ ಎಲ್ಲ ಜನರಿಗೂ ಮಾಡಿದ ಮೋಸ ಎಂದ ಹಾಗಾಯಿತು. ಈ ಮೂರೂ ಆಯಾಮಗಳಲ್ಲಿ ನೋಡಿದರೂ ಮೋದಿ ಅವರು ಪ್ರಧಾನಿ ಸ್ಥಾನದಲ್ಲಿ ಕೂರುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.
ಕೋಮುವಾದದ ಅಪಾಯದ ಬಗ್ಗೆ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಮೋದಿ, ಪ್ರಚೋದನಕಾರಿ ಭಾಷಣ ಮಾಡುವ ಎಷ್ಟು ಕೋಮುವಾದಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ? ಅಮೆರಿಕಕ್ಕೆ ಹೋಗುವ ಮೊದಲು ಮುಸ್ಲಿಮರು ದೇಶಭಕ್ತರು ಎಂದು ಮೋದಿ ಹೇಳಿದರೆ, ಇಲ್ಲಿ ಅವರ ಹಿಂಬಾಲಕರು ಮಾತ್ರ ಮುಸ್ಲಿಮರ ವಿರುದ್ಧ ಕೆಂಡಕಾರುವ ಭಾಷಣ ಮಾಡುತ್ತಾರೆ. ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಅಖಂಡ ಭಾರತದ ಹೆಸರಿನಲ್ಲಿ ಕೋಮು ಬಾಷಣ ಮಾಡುವ ಬಿಜೆಪಿಗರು, ಸ್ವಾತಂತ್ರ್ಯೋತ್ಸವದ ಮರುದಿನ ತಿರಂಗಾ ಯಾತ್ರೆ ಮಾಡುತ್ತಾರೆ. ಒಂದಕ್ಕೊಂದು ಸಂಬಂಧವೇ ಇಲ್ಲ. ಪಾಕಿಸ್ತಾನದ ಜನಕ ಮುಹಮ್ಮದ್ ಆಲಿ ಜಿನ್ನಾನನ್ನು ಆಡ್ವಾಣಿ ಹಾಡಿ ಹೊಗಳಿದಾಗ ಬಿಜೆಪಿ ಪರಿವಾರ ಸುಮ್ಮನಿತ್ತು. ಆಹ್ವಾನವಿಲ್ಲದೆ ಮೋದಿ ಪಾಕ್‌ಗೆ ಹೋಗಿ ಪಾಕ್ ಪ್ರಧಾನಿಯ ತಾಯಿಗೆ ಸೀರೆ ಕೊಟ್ಟು, ಮಾವಿನ ಹಣ್ಣು ಗಿಫ್ಟ್ ಪಡೆದುಕೊಂಡು ಬಂದಾಗಲೂ ಸುಮ್ಮನಿತ್ತು. ಈಗ ಮಾಜಿ ಸಂಸದೆ ರಮ್ಯಾ ಪಾಕ್‌ನಲ್ಲೂ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ ಮಾತ್ರಕ್ಕೆ ದೊಡ್ಡ ಹುಯಿಲೆಬ್ಬಿಸುತ್ತಾರೆ. ಇದು ಬಿಜೆಪಿ ಮತ್ತದರ ಪರಿವಾರದ ಢೋಂಗಿ ದೇಶಪ್ರೇಮಕ್ಕೆ ತಾಜಾ ಉದಾಹರಣೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಶ್ ರೈ ಅಂಕೊತ್ತಿಮಾರ್, ಬಾಸ್ಕರ ಗೌಡ, ನಿರ್ಮಲ್ ಕುಮಾರ್ ಜೈನ್, ಶಶಿಕಿರಣ್ ರೈ ಉಪಸ್ಥಿತರಿದ್ದರು.







