ಶೂಟರ್ ಮಗಳಿಗಾಗಿ 5 ಲಕ್ಷ ರೂ. ಬೆಲೆಯ ಜರ್ಮನ್ ರೈಫಲ್ ಖರೀದಿಸಿದ ಬಡ ರಿಕ್ಷಾ ಚಾಲಕ!

ಇದನ್ನು ನೀವು ತ್ಯಾಗವೆಂದು ಕರೆಯಿರಿ ಇಲ್ಲ ವಾತ್ಸಲ್ಯ ಎಂದಾದರೂ ಕರೆಯಿರಿ.... ರಾಷ್ಟ್ರೀಯ ಮಟ್ಟದ ಶೂಟರ್ ಆಗಿರುವ ತನ್ನ ಏಕೈಕ ಪುತ್ರಿಗಾಗಿ ಅಹ್ಮದಾಬಾದ್‌ನ ರಿಕ್ಷಾ ಚಾಲಕ ಮಣಿಲಾಲ್ ಗೋಹಲ್, ಬರೋಬ್ಬರಿ 5 ಲಕ್ಷ ರೂ. ವೌಲ್ಯದ ಜರ್ಮನಿ ನಿರ್ಮಿತ ರೈಫಲ್‌ನ್ನು ಖರೀದಿಸಿದ್ದಾನೆ. ಮಗಳ ಮದುವೆಗಾಗಿ ಕಷ್ಟಪಟ್ಟು ಕೂಡಿಟ್ಟ ಹಣದಿಂದಲೇ ಆತ ಈ ರೈಫಲ್ ಖರೀದಿಸಿದ್ದಾನೆ. ತನ್ನ ಮಗಳು ಅತ್ಯುತ್ತಮ ಶೂಟರ್ ಆಗಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಹೊತ್ತಿರುವ ಮಣಿಲಾಲ್, ಈ ದುಬಾರಿ ವೆಟ್ಚದ ರೈಫಲನ್ನು ಆಕೆಗೆ ನೀಡಿದ್ದಾನೆ.
ಮಣಿಲಾಲ್ ತನ್ನ ಮಗಳು ಮಿತ್ತಲ್ ಜೊತೆ, ಈ ಹೊಸ ಗನ್‌ಗೆ ಪರವಾನಗಿ ಪಡೆಯಲು ಸ್ಥಳೀಯ ಪೊಲೀಸ್ ಆಯುಕ್ತರ ಬಳಿಗೆ ತೆರಳಿದಾಗ, ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ರಿಕ್ಷಾ ಚಾಲಕನೊಬ್ಬ ಇಷ್ಟು ದೊಡ್ಡ ದುಬಾರಿಯಾದ ರೈಫಲ್‌ನ್ನು ಖರೀದಿಸಿದ್ದನ್ನು ಕಂಡು ಅಚ್ಚರಿಗೊಂಡರು. ಅದೃಷ್ಟವಶಾತ್ ಪೊಲೀಸರು, ಯಾವುದೇ ತಕರಾರಿಲ್ಲದೆ ತಂದೆ,ಮಗಳಿಗೆ ಗನ್‌ಲೈಸೆನ್ಸ್ ಪಡೆದುಕೊಳ್ಳಲು ನೆರವಾದರು ಹಾಗೂ ಮಗಳಿಗಾಗಿ ಮಣಿಲಾಲ್‌ನ ತ್ಯಾಗವನ್ನು ತುಂಬುಹೃದಯದಿಂದ ಪ್ರಶಂಸಿಸಿದರು.
‘‘ನನ್ನ ಈ ದುಬಾರಿಯಾದ ಹವ್ಯಾಸವನ್ನು ಪ್ರೋತ್ಸಾಹಿಸಲು ನನ್ನ ತಂದೆ ಹಾಗೂ ಕುಟುಂಬ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ರೈಫಲ್ ಪಡೆದ ಆನಂತರ ನಾನು ದೇಶದ ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಕಠಿಣವಾಗಿ ಶ್ರಮಿಸುವುದಾಗಿ ಮಿತ್ತಲ್ ತಿಳಿಸಿದ್ದಾಳೆ.
ಮಣಿಲಾಲ್‌ನ ಅಟೋರಿಕ್ಷಾ ವೃತ್ತಿಯನ್ನೇ ಅವಲಂಭಿಸಿರುವ ಕುಟುಂಬಕ್ಕೆ, ಆಕೆಯ ದುಬಾರಿಯದ ಶೂಟಿಂಗ್ ಹವ್ಯಾಸಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ಸರಿದೂಗಿಸುವುದು ಅಸಾಧ್ಯವಾಗಿತ್ತು.ಆದರೂ ಮಣಿಲಾಲ್ ತನ್ನ ಪ್ರೀತಿಯ ಮಗಳಿಗೆ ಶೂಟಿಂಗ್‌ನಲ್ಲಿ ತರಬೇತಿ ಪಡೆಯುವುದಕ್ಕಾಗಿ ಆಕೆಯನ್ನು ರೈಫಲ್ ಕ್ಲಬ್‌ಗೆ ಸೇರ್ಪಡೆಗೊಳಿಸಿದ್ದ ಹಾಗೂ ಆಕೆಗೆ ಬಾಡಿಗೆಯ ರೈಫಲೊಂದನ್ನು ಕೂಡಾ ಒದಗಿಸಿದ್ದ.
ಅಹ್ಮದಾಬಾದ್‌ನ ಗೋಮತಿ ಪ್ರದೇಶದ ಬಡಾವಣೆಯೊಂದರಲ್ಲಿ ತನ್ನ ಪಾಲಕರು ಹಾಗೂ ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿರುವ ಮಿತ್ತಲ್ ಕಳೆದ ನಾಲ್ಕು ವರ್ಷಗಳಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. 2013ರಲ್ಲಿ ಅತ್ಯಂತ ಕನಿಷ್ಠ ಮಟ್ಟದ ತರಬೇತಿಯ ಹೊರತಾಗಿಯೂ ಮಿತ್ತಲ್ 57ನೇ ಅಖಿಲ ಭಾರತ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಆಕೆ ಕಂಚಿನ ಪದಕ ಗೆದ್ದಿದ್ದಳು.
ರಾಷ್ಟ್ರೀಯ ಮಟ್ಟದ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಬಳಿಕ ಮಿತ್ತಲ್‌ಳ ಆತ್ಮವಿಶ್ವಾಸ ಹೆಚ್ಚಿತು. ಆದರೆ ತನ್ನ ಹೆಸರಿನಲ್ಲಿ ರೈಫಲ್ ಇಲ್ಲದೆ ತರಬೇತಿ ಪಡೆಯುವುದು ಅಥವಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬೇರೆಡೆಗೆ ಪ್ರಯಾಣಿಸುವುದು ತೀರಾ ಕಷ್ಟಕರವೆಂದು ಆಕೆಗೆ ಅರಿವಾಯಿತು. ಹೀಗಾಗಿ, ತಂದೆ ಮಣಿಲಾಲ್ ಹಾಗೂ ಹಿರಿಯ ಸಹೋದರ ಜೈನೀಶ್ ಆಕೆಯ ಮದುವೆಗಾಗಿ ಕೂಡಿಟ್ಟ ಹಣದಿಂದಲೇ ದುಬಾರಿಯಾದ 50 ಮೀಟರ್ ವ್ಯಾಪ್ತಿಯ ಜರ್ಮನ್ ರೈಫಲ್ ತೆಗೆಸಿಕೊಟ್ಟರು.
ಮಿತ್ತಲ್‌ಗೆ ಶೂಟಿಂಗ್ ಹವ್ಯಾಸವಾದರೂ, ಭಾರತೀಯ ಸೇನೆಯನ್ನು ಸೇರಬೇಕೆಂಬ ಭಾರೀ ದೊಡ್ಡ ಹಂಬಲವನ್ನು ಹೊಂದಿದ್ದಾಳೆ. ಆದರೆ ಕುಳ್ಳಗಿರುವ ಕಾರಣ ಸೇನೆಗೆ ಸೇರಲು ಆಕೆಗೆ ಸಾಧ್ಯವಾಗಿಲ್ಲ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿಯೂ ಆಕೆ ತೇರ್ಗಡೆಯಾಗಿದ್ದಾಳೆ, ಆದರೆ ಎತ್ತರದ ಕೊರತೆಯ ಕಾರಣ ಆ ಹುದ್ದೆಗೂ ಆಕೆ ನೇಮಕವಾಗಿಲ್ಲ. ಮಿತ್ತಲ್‌ಳ ಕಿರಿಯ ಸಹೋದರ ಮಿತೇಶ್ ಕೂಡಾ ಪಿಸ್ತೂಲ್ ಶೂಟರ್ ಆಗಲು ಪ್ರಯತ್ನಿಸುತ್ತಿದ್ದಾನೆ.





