ದೌರ್ಜನ್ಯಗಳ ವಿರುದ್ಧ ಸೆ.16ರಂದು ದಲಿತರ ಮಹಾಸಮಾವೇಶ

ಹೊಸದಿಲ್ಲಿ, ಆ.26: ಆರೆಸ್ಸೆಸ್‌ನ ‘ಸಾಂಸ್ಕೃತಿಕ ಫ್ಯಾಶಿಸ್ಟ್‌ವಾದ’ವನ್ನು ಎದುರಿಸುವ ಬಗ್ಗೆ ಕಾರ್ಯತಂತ್ರವೊಂದನ್ನು ರೂಪಿಸುವುದಾಗಿ ಬಿಜೆಪಿಯೇತರ ರಾಜಕೀಯ ಪಕ್ಷಗಳ ಬೆಂಬಲಿತ ವಿವಿಧ ದಲಿತ ಸಂಘಟನೆಗಳು ಶುಕ್ರವಾರ ಘೋಷಿಸಿವೆ. ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ದಿಲ್ಲಿಯನ್ನು ಕೇಂದ್ರೀಕರಿಸಲ್ಪಟ್ಟ ಏಕೀಕೃತ ಕಮಾಂಡ್ ಒಂದನ್ನು ರಚಿಸುವ ಬಗ್ಗೆಯೂ ಬಹುತೇಕ ಎಡಪಕ್ಷಗಳಿಗೆ ನಿಷ್ಠವಾಗಿರುವ ಈ ದಲಿತ ಸಂಘಟನೆಗಳು ಘೋಷಿಸಿವೆ.
ದಲಿತ ಸ್ವಾಭಿಮಾನ ಸಂಘರ್ಷ್ ಸಂಘಟನೆಯ ಪರವಾಗಿ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಗುರುವಾರ ಹೊಸದಿಲ್ಲಿಯಲ್ಲಿ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಲಿತ ಸಮುದಾಯದ ಸದಸ್ಯರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ ಹಾಗೂ ಆರೆಸ್ಸೆಸ್ ಫ್ಯಾಶಿಸ್ಟ್‌ವಾದಕ್ಕೆ ಕುಮ್ಮಕ್ಕು ನೀಡುತ್ತಿದೆಯೆಂದು ಆರೋಪಿಸಿದರು. ಸೆಪ್ಟೆಂಬರ್ 16ರಂದು ದಿಲ್ಲಿಯ ಸಂಸತ್‌ಭವನ ರಸ್ತೆಯಲ್ಲಿ ದಲಿತರ ಬೃಹತ್ ಸಮಾವೇಶ ಹಾಗೂ ಧರಣಿಯ್ನು ನಡೆಯಲಿದ್ದು, ದೇಶಾದ.್ಯಂತದ ಹಲವಾರು ದಲಿತ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಲಿವೆಯೆಂದು ವರು ಹೇಳಿದರು.
ಪ್ರಸ್ತುತ ದಲಿತ ಸಂಘಟನೆಗಳು ಸಾಂಸ್ಕೃತಿಕ-ಸಾಮಾಜಿಕ-ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಸೂಚಿಯೊಂದನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಅದನ್ನು ಸೆಪ್ಟೆಂಬರ್ 16ರ ಸಮಾವೇಶದಲ್ಲಿ ಪ್ರಕಟಿಸಲಾಗುವುದೆಂದುಅಂಬೇಡ್ಕರ್ ತಿಳಿಸಿದರು.
ರೋಹಿತ್ ವೇಮುಲಾ ಆತ್ಮಹತ್ಯೆ ಹಾಗೂ ಉನಾ ಘಟನೆ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ರ್ಯಾಲಿಯನ್ನು ನಡೆಸಲು ನಿರ್ಧರಿಸಿವೆ.





