ದಾದ್ರಿ ಹತ್ಯೆ ಪ್ರಕರಣ : ಸೋದರನ ಹೊರತು ಇಖ್ಲಾಕ್ ಕುಟುಂಬದ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ

ಲಕ್ನೊ, ಆ.26: ಗೋವಧೆಯ ಆರೋಪ ಎದುರಿಸುತ್ತಿರುವ ದಾದ್ರಿಯ ಮುಹಮ್ಮದ್ ಇಖ್ಲಾಕ್‌ನ ಕುಟುಂಬದ 6 ಮಂದಿಯ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಆದರೆ, ಪ್ರಕರಣದ ಪ್ರಧಾನ ಆರೋಪಿ, ಇಖ್ಲಾಕ್‌ನ ಸೋದರ ಜಾನ್ ಮುಹಮ್ಮದ್ ಎಂಬಾತನಿಗೆ ಈ ಪರಿಹಾರ ನೀಡಲು ಅದು ನಿರಾಕರಿಸಿದೆ. ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧಿಸಲಾಗಿದ್ದು, ಹಂತಕರಿಗೆ 2 ವರ್ಷ ಶಿಕ್ಷೆ ವಿಧಿಸಬಹುದಾಗಿದೆ.
ಗೋವಧೆಯ ಆರೋಪದಲ್ಲಿ ಕಳೆದ ಸೆಪ್ಬಂಬರ್‌ನಲ್ಲಿ ಇಖ್ಲಾಕ್‌ನನ್ನು ಗುಂಪೊಂದು ಥಳಿಸಿ ಕೊಂದಿತ್ತು. ತಮ್ಮಲ್ಲಿ ಗೋಮಾಂಸವಿರಲಿಲ್ಲವೆಂದು ಇಖ್ಲಾಕ್‌ನ ಕುಟುಂಬ ಪ್ರತಿಪಾದಿಸಿತ್ತು. ಅವರ ಫ್ರಿಜ್‌ನಲ್ಲಿದ್ದುದು ಆಡಿನ ಮಾಂಸವೆಂದು ಒಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು.
ಆದರೆ ಅಲ್ಲಿದ್ದುದು ಗೋ ಮಾಂಸವೇ ಎಂದು ಸರಕಾರಿ ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿದ ಬಳಿಕ, ಕಳೆದ ತಿಂಗಳು ಇಖ್ಲಾಕ್‌ನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಇಖ್ಲಾಕ್‌ನ ಕುಟುಂಬ ಕರುವೊಂದನ್ನು ವಧಿಸಿದ್ದು, ಜಾನ್ ಮುಹಮ್ಮದ್ ಅದರ ಗಂಟಲ ಮೇಲೆ ಕುಳಿತಿದ್ದುದನ್ನು ತಾವು ಕಂಡಿದ್ದೇವೆಂದು ಆತನ ನೆರೆ ಮನೆಯವರು ಸ್ಥಳೀಯ ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಿದ್ದರು.





