ಮುಂದಿನ ಮೂರು ಒಲಿಂಪಿಕ್ಸ್ ಗಳಿಗೆ ಪ್ರಧಾನಿಯಿಂದ ವಿಶೇಷ ಯೋಜನೆ

ಹೊಸದಿಲ್ಲಿ, ಆ,26: ಮುಂದಿನ ಮೂರು ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳ ಸಿದ್ಧತೆಗೆ ನೆರವಾಗಲು ರಣನೀತಿ ರಚನೆಗಾಗಿ ಸರಕಾರ ನೂತನ ಕಾರ್ಯಪಡೆಯನ್ನು ಸ್ಥಾಪಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಪ್ರಧಾನಿ ಘೋಷಿಸಿರುವ ಕಾರ್ಯಪಡೆಯಲ್ಲಿ ಮೂಲಭೂತ ಸೌಕರ್ಯ, ತರಬೇತಿ ಹಾಗೂ ಆಯ್ಕೆ ಪ್ರಕ್ರಿಯೆಯೂ ಒಳಗೊಂಡಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಅವರು ಹೇಳಿದ್ದಾರೆ.
2020, 2024 ಹಾಗೂ 2028ರಲ್ಲಿ ನಡೆಯಲಿರುವ ಮುಂಬರುವ ಮೂರು ಒಲಿಂಪಿಕ್ ಗೇಮ್ಸ್‌ಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪರಿಣಾಮಕಾರಿ ಭಾಗವಹಿಸುವಿಕೆಗೆ ಸಮಗ್ರ ಕ್ರಮಗಳ ಯೋಜನೆಯ ತಯಾರಿಗೆ ಕಾರ್ಯಪಡೆಯೊಂದನ್ನು ರಚಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಾರ್ಯಪಡೆಯು ಕ್ರೀಡಾ ವ್ಯವಸ್ಥೆಗಳು, ತರಬೇತಿ, ಆಯ್ಕೆ ಪ್ರಕ್ರಿಯೆ ಹಾಗೂ ಸಂಬಂಧಿತ ಎಲ್ಲ ವಿಷಯಗಳ ಬಗ್ಗೆ ತಯಾರಿ ನಡೆಸಲಿದೆ. ಅಧಿಕಾರಿಗಳ ಹೊಣೆಗಾರಿಕೆ, ಅವರ ನಿರ್ಲಕ್ಷತನದ ಬಗ್ಗೆಯೂ ಸೂಕ್ತ ಹೆಜ್ಜೆ ಇಡಲಿದೆ ಎಂದು ಮೋದಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಭಾರತ ಇತ್ತೀಚೆಗೆ ರಿಯೋ ಡಿಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೇವಲ ಎರಡು ಪದಕವನ್ನು ಜಯಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ಕಳಪೆ ಪ್ರದರ್ಶನ ನೀಡಲು ದೇಶದಲ್ಲಿ ವ್ಯವಸ್ಥೆ ಹಾಗೂ ಬೆಂಬಲದ ಕೊರತೆ ಕಾರಣವೆಂಬ ಟೀಕೆಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮೋದಿ ಈ ಹೆಜ್ಜೆ ಇಟ್ಟಿದ್ದಾರೆ.





