ಸಾಮಾಜಿಕ ಕೆಡುಕುಗಳ ವಿರುದ್ಧ ಎಲ್ಲರೂ ಒಂದಾಗಬೇಕಿದೆ: ಕೆ.ಎಂ. ಅಶ್ರಫ್
.jpg)
ಉಪ್ಪಿನಂಗಡಿ, ಆ.26: ವಿವೇಕಾನಂದರು, ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂರಂತಹ ಆದರ್ಶ ಪುರುಷರ ಆದರ್ಶಗಳನ್ನು ನಾವಿಂದು ಮೈಗೂಡಿಸಿಕೊಳ್ತಾ ಇಲ್ಲ. ಇದರಿಂದಾಗಿ ದೇಶದಲ್ಲಿಂದು ಭ್ರಷ್ಟಾಚಾರ, ಅತ್ಯಾಚಾರದಂತಹ ಘಟನೆಗಳು ಹೆಚ್ಚುತ್ತಿದ್ದು, ಶಿಕ್ಷಿತರೇ ಹೆಚ್ಚಾಗಿ ಕೋಟಿಗಟ್ಟಲೆ ಹಗರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಕೆ.ಎಂ. ಅಶ್ರಫ್, ಈ ದೇಶವನ್ನು ಸರಿಪಡಿಸಲು ಪ್ರತಿಯೋರ್ವರೂ ಚಿಂತಿಸಬೇಕಾಗಿದ್ದು, ಇಲ್ಲಿರುವ ಕೆಡುಕನ್ನು ಎಲ್ಲರೂ ಒಂದಾಗಿ ವಿರೋಧಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್‌ನ ಉಪ್ಪಿನಂಗಡಿ ಶಾಖೆಯ ವತಿಯಿಂದ ಇಲ್ಲಿನ ಬಾಳಿಯೂರು ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ನಡೆದ ಶಾಂತಿ ಮತ್ತು ಮಾನವೀಯತೆಯ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮುಖ್ಯಭಾಷಣ ಮಾಡುತ್ತಿದ್ದರು.
ವಿದೇಶಿ ಸಂಸ್ಕೃತಿಯ ಆಮದಿನಲ್ಲಿ ತೊಡಗಿರುವ ನಾವಿಂದು ಬ್ರಿಟಿಷರ ಕುಟಿಲ ನೀತಿ ಅನುಸರಿಸತೊಡಗಿದ್ದೇವೆ. ಇದರಿಂದ ನಮ್ಮಲ್ಲಿನ ಪರಸ್ಪರ ಸಂಬಂಧಗಳು ದೂರವಾಗುತ್ತಿದ್ದು, ಮಾನವೀಯತೆಯೆಂಬುದು ಮರೆತುಹೋಗಿದೆ. ಆದ್ದರಿಂದ ಪ್ರತಿಯೋರ್ವ ಭಾರತೀಯನೂ ಜಾತಿ, ಧರ್ಮ, ಮತಭೇದವನ್ನು ಬಿಟ್ಟು ಒಂದಾಗಿ ಶ್ರಮಿಸಿದಾಗ ಮಾತ್ರ ಸಮಾಜದಲ್ಲಿರುವ ಈ ಕೆಡುಕನ್ನು ತೊಡೆದು ಹಾಕಲು ಸಾಧ್ಯ ಎಂದ ಅವರು, ಗ್ರಾಮ ಗ್ರಾಮಗಳಲ್ಲಿ ಸರ್ವಧರ್ಮೀಯರನ್ನೊಳಗೊಂಡ ಸದ್ಭಾವನ ವೇದಿಕೆಯನ್ನು ರಚಿಸಿ, ಸಾಮಾಜಿಕ ಕೆಡುಕುಗಳ ವಿರುದ್ಧ ಹೋರಾಟ ನಡೆಸಲು ಜಮಾಅತೆ ಇಸ್ಲಾಮೀ ಹಿಂದ್ ಮುಂದಾಗಿದ್ದು, ಪ್ರತಿಯೋರ್ವರು ಇದರಲ್ಲಿ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಜಿಲ್ಲಾ ಸಂಚಾಲಕ ಇಲ್ಯಾಸ್, ಸ್ಥಾನೀಯ ಅಧ್ಯಕ್ಷ ಯು.ಕೆ. ಇಬ್ರಾಹೀಂ, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೊಯ್ದೀನ್, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿ ಸಮೀನಾ ಯು., ಪ್ರಮುಖರಾದ ಸೇಸಪ್ಪ ನೆಕ್ಕಿಲು, ಅಬ್ದುಲ್ ಅಯ್ಯೂಬ್, ಅಲ್ತಾಫ್, ಮೊಯ್ದೀನ್ ಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್‌ನ ಅಬ್ದುರ್ರವೂಫ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.







