ಶಿಕ್ಷಕರು ವಿದ್ಯಾರ್ಥಿಗಳಿಗೆ ಬಾಹ್ಯ ಜಗತ್ತಿನ ಅರಿವು ಮೂಡಿಸಿ: ಎನ್.ಎಚ್.ಯೋಗೀಶ್
ಇಂಗ್ಲಿಷ್ ತರಬೇತಿ ಕಾರ್ಯಾಗಾರ
.jpg)
ಸಾಗರ, ಆ.26: ವಿದ್ಯಾರ್ಥಿಗಳಿಗೆ ಶಿಕ್ಷಕರಾಗುವ ಜೊತೆಗೆ ಅವರಿಗೆ ಬಾಹ್ಯ ಜಗತ್ತಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಪ್ರಯತ್ನ ನಡೆಸಬೇಕು ಎಂದು ಸರ್ವಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಎನ್.ಎಚ್.ಯೋಗೀಶ್ ಹೇಳಿದರು. ಇಲ್ಲಿನ ಎಚ್.ಶಿವಲಿಂಗಪ್ಪಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಇಂಗ್ಲಿಷ್ ಶಿಕ್ಷಕರ ಫೋರಂ ವತಿಯಿಂದ ಪ್ರೌಢಶಾಲಾ ಇಂಗ್ಲಿಷ್ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಇಂಗ್ಲಿಷ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಕರ ಪ್ರಮುಖ ಆದ್ಯತೆಯಾಗಿರಬೇಕು. ನಮ್ಮ ಕಲಿಕಾ ಸಾಮರ್ಥ್ಯವು ಪಠ್ಯವಸ್ತು, ಮಕ್ಕಳ ಅಭಿವೃದ್ಧಿ ಹಾಗೂ ಹೊರ ಬರುವ ಫಲಿತಾಂಶಕ್ಕೆ ಪ್ರತಿಬಿಂಬವಾಗಿರಬೇಕು. ಕೇವಲ ಪಠ್ಯದಲ್ಲಿರುವ ವಸ್ತುವೊಂದನ್ನು ಬೋಧಿಸಿ, ಮಕ್ಕಳನ್ನು ಬೌದ್ಧಿಕವಾಗಿ ಸಜ್ಜುಗೊಳಿಸಿ ಅವರು ಹೆಚ್ಚಿನ ಅಂಕ ಪಡೆದರೆ ಶಿಕ್ಷಕ ಪೂರ್ಣ ಯಶಸ್ಸು ಕಾಣುವುದಿಲ್ಲ. ಬದಲಾಗಿ ಮಗು ಸಮಾಜದೊಳಗೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ರೀತಿಯಲ್ಲಿ ಅರ್ಹ ವಿಷಯಗಳನ್ನು ಬೋಧಿಸಬೇಕು ಎಂದು ಸಲಹೆ ಮಾಡಿದರು. ಪ್ರಸ್ತುತ ಪರೀಕ್ಷಾ ಪದ್ಧತಿ ಅತ್ಯಂತ ಸರಳವಾಗಿದೆ. ಬದಲಾದ ಪರಿಸ್ಥಿತಿ ಹಾಗೂ ಕಾಲಕಾಲಕ್ಕೆ ಪಠ್ಯಕ್ರಮಗಳನ್ನು ಬದಲಾವಣೆ ಮಾಡಲಾಗುತ್ತದೆ. ಇದಕ್ಕೆ ಶಿಕ್ಷಕ ಸಮೂಹ ಒಗ್ಗಿಕೊಳ್ಳಬೇಕು. ನಿಮ್ಮ ಜ್ಞಾನವನ್ನು ಒರೆಗೆ ಹಚ್ಚಲು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಇಂತಹ ಕಾರ್ಯಾಗಾರಗಳಲ್ಲಿ ಕಲಿತಿದ್ದನ್ನು ಮಕ್ಕಳಿಗೆ ಬೋಧಿಸುವಾಗ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮೈಸೂರಿನ ಡಾ. ರಾಜಗೋಪಾಲ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಇಂಗ್ಲಿಷ್ ಭಾಷೆಗೆ ಹೆಚ್ಚಿನ ಮಾನ್ಯತೆ ಸಿಗುತ್ತಿದೆ. ಪ್ರತಿ ಶಾಲೆಯಲ್ಲೂ ಮಕ್ಕಳು ಸರಳವಾಗಿ ಇಂಗ್ಲಿಷ್ ಕಲಿಯುವ ವಾತಾವರಣ ಸೃಷ್ಟಿಯಾಗಬೇಕು. ಇಂತಹ ಕಾರ್ಯಾಗಾರಗಳು ಇಂಗ್ಲಿಷ್ ಶಿಕ್ಷಕರಲ್ಲಿ ಆತ್ಮಸ್ಥೈರ್ಯವನ್ನು ವೃದ್ಧ್ದಿಸುತ್ತದೆ ಎಂದು ತಿಳಿಸಿದರು. ಎಚ್. ಶಿವಲಿಂಗಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜಪ್ಪಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಫೋರಂ ಅಧ್ಯಕ್ಷ ಇ.ಎಂ.ಠಾಕೂರ್, ಬಾಲಚಂದ್ರ ಯಾಜೆ, ಡಿ.ಚಂದ್ರಶೇಖರ್, ಪ್ರಸನ್ನ, ಧರ್ಮಪ್ಪ, ಈಳಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.





