ದೇಶದ, ಮನುಕುಲದ ಅಭಿವೃದ್ಧಿಗೆ ಯುವಜನತೆ ತೊಡಗಿಸಿಕೊಳ್ಳಿ: ಡಾ. ಝರೀನಾ ಕೌಸರ್
ಯುವ ರೆಡ್‌ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ

ಚಿಕ್ಕಮಗಳೂರು, ಆ.26: ದೇಶದ ಮತ್ತು ಮನುಕುಲದ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಯುವಜನತೆಗೆ ರೆಡ್‌ಕ್ರಾಸ್ ಉತ್ತಮ ವೇದಿಕೆ ಎಂದು ಪ್ರಾಂಶುಪಾಲೆ ಡಾ. ಝರೀನಾ ಕೌಸರ್ ಅಭಿಪ್ರಾಯಿಸಿದರು.
ಐಡಿಎಸ್‌ಜಿ ಸರಕಾರಿ ಕಾಲೇಜಿನಲ್ಲಿ ಪ್ರಸಕ್ತಸಾಲಿನ ಯುವರೆಡ್‌ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಅತೀ ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ಭಾರತ ‘ಬದುಕು-ಬದುಕಲು ಬಿಡು’ ಎಂಬ ಮನೋಭಾವ ಹೊಂದಿದೆ. ಯುವಶಕ್ತಿ ಇದನ್ನು ಅರ್ಥಮಾಡಿಕೊಂಡು ಮತ್ತೊಬ್ಬರಿಗೆ ಉಪಕಾರಿಗಳಾಗಿ ಪರಸ್ಪರ ಸೌಹಾರ್ದದಿಂದ ಬಾಳಿದರೆ ಮಾನವೀಯತೆ ಮೆರೆಯುತ್ತದೆ. ಸ್ವಾರ್ಥರಹಿತ ಸೇವೆಯಲ್ಲಿ ಮಾನವೀಯತೆಯನ್ನು ಕಾಣಲು ರೆಡ್‌ಕ್ರಾಸ್ ಸ್ಫೂರ್ತಿ ಎಂದರು.
ಜಿಲ್ಲಾ ರೆಡ್‌ಕ್ರಾಸ್ ಘಟಕದ ಮುಖಂಡ ಡಾ. ಕೆ.ಸುಂದರ್‌ಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯುದ್ಧಭೂಮಿಯಲ್ಲಿ ರೆಡ್‌ಕ್ರಾಸ್‌ಸಂಸ್ಥೆ ಜನ್ಮತಾಳಿದೆ. 153ವರ್ಷದ ಹಿಂದೆ ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ಪ್ರಾರಂಭಗೊಂಡು ವಿಶ್ವವ್ಯಾಪಿಯಾಗಿದೆ. ಕರ್ನಾಟಕದಲ್ಲಿ 1920ರಲ್ಲಿ ಪ್ರಾರಂಭಗೊಂಡಿದ್ದು, 10ಲಕ್ಷ ಯುವ ಸದಸ್ಯರಿದ್ದಾರೆ. ಅವರೆಲ್ಲ ತಲಾ 50ರೂ. ಸದಸ್ಯತ್ವ ಶುಲ್ಕ ನೀಡುವುದರೊಂದಿಗೆ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದರು.
ಪರಿಸರನಾಶ ಮತ್ತು ಭ್ರಷ್ಟಾಚಾರದಿಂದ ದೇಶ ನಲುಗುತ್ತಿದೆ. ಅಧಿಕಾರ, ಅಂತಸ್ತು, ಹಣ ಗಳಿಕೆಗಾಗಿ ದುಡಿಮೆಯ ಓಟದಲ್ಲಿ ಮೌಲ್ಯಗಳು ಇಂದು ನಾಶವಾಗುತ್ತಿದೆ. ಅಣುಬಾಂಬ್‌ಗಳ ಸೃಷ್ಟಿಯಿಂದ ಪ್ರಪಂಚ ಸದಾ ಭಯದ ನೆರಳಿನಲ್ಲಿ ಬಾಳುವಂತಾಗಿದೆ. ಅಣುಬಾಂಬ್‌ನ್ನು ಶೂನ್ಯ ಸ್ಥಿತಿಗೆ ತರುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿದೆ ಎಂದ ಡಾ. ಸುಂದರ್‌ಗೌಡ, ಶಾಲಾ ಕಾಲೇಜುಗಳಲ್ಲಿ ಯುವರೆಡ್ ಕ್ರಾಸ್ ಘಟಕಗಳ ಮೂಲಕ ಮಾನವೀಯ ಸೇವೆ ಮತ್ತು ಸಹೋದರತೆ ಬೆಳೆಸಬೇಕಾಗಿದೆ ಎಂದರು. ಸಿಡಿಸಿ ಸದಸ್ಯ ಶಿಕ್ಷಣ ತಜ್ಞ ಬಿ.ತಿಪ್ಪೇರುದ್ರಪ್ಪಮಾತನಾಡಿ, ಡ್ರಗ್‌ಮಾಫಿಯಾದಿಂದಾಗಿ ಉಕ್ಕಿನ ಸ್ನಾಯುಗಳಾಗಬೇಕಾದ ಯುವಕರು ಇಂದು ನಿಶ್ಯಕ್ತಿ ಮತ್ತು ನಿಸ್ತೇಜರಾಗಿ ಕಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಾಗತಿಕ ಶಾಂತಿ ಮಾನವೀಯತೆಯನ್ನು ಪ್ರತಿಪಾದಿಸುವ ರೆಡ್‌ಕ್ರಾಸ್ ಯುವಜನರಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದರು.
ಸಿಡಿಸಿ ಸದಸ್ಯ, ನಗರಸಭಾ ಸದಸ್ಯ ಎಚ್.ಡಿ.ತಮ್ಮಯ್ಯ ಮಾತನಾಡಿದರು. ಕಾಲೇಜಿನ ಯುವರೆಡ್‌ಕ್ರಾಸ್ ಘಟಕದ ಸಂಯೋಜನಾಧಿಕಾರಿ ಪ್ರೊ.ಯು.ಕೆ.ಬಸವರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಸಿ ಮಾತನಾಡಿ, ತ್ಯಾಗ, ಸೇವೆಯ ಜೊತೆಗೆ ಭ್ರಾತೃತ್ವ ಮತ್ತು ವಿಶ್ವಶಾಂತಿಯನ್ನು ಉದ್ದೀಪನಗೊಳಿಸಲು ಯುವರೆಡ್‌ಕ್ರಾಸ್ ಕಾರ್ಯ ಪ್ರವೃತ್ತವಾಗಿದೆ. 2012ರಿಂದ ಕಾಲೇಜುಗಳಲ್ಲಿ ಯುವ ಘಟಕ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ 700ಕ್ಕೂ ಹೆಚ್ಚು ಇಂತಹ ಘಟಕಗಳಿವೆ ಎಂದರು. ವಿದ್ಯಾರ್ಥಿ ಸದಸ್ಯರಾದ ಕೆ.ಎಂ.ದರ್ಶನ್ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿದರು. ಎಂ.ಎಸ್.ಕಾವ್ಯಾ ವಂದಿಸಿದರು. ಸಿಂಧೂ ನಾಡಗೀತೆ ಹಾಡಿದರು.







