ನಿವೇದಿತ್ ಆಳ್ವರಿಂದ ಸುಸಜ್ಜಿತ ಮೀನು ಮಾರುಕಟ್ಟೆ ಉದ್ಘಾಟನೆ

ಹೊನ್ನಾವರ, ಆ.26: ತನ್ನ ಅಧಿಕಾರಾವಧಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ 25 ಕೋಟಿ ರೂ. ಅನುದಾನದಡಿಯಲ್ಲಿ 14 ಮೀನು ಮಾರುಕಟ್ಟೆಗಳಿಗೆ, ತೂಗುಸೇತುವೆ ನಿರ್ಮಾಣಕ್ಕೆ ಹಾಗೂ ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಹಣ ನೀಡಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಹೇಳಿದರು.
ಅವರು ತಾಲೂಕಿನ ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ 55 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಮಾರು ಕಟ್ಟೆಯನ್ನು ಗ್ರಾಪಂಗೆ ಹಸ್ತಾಂತರಿಸಲಾಗಿದೆ. ಇದು ನಿಮ್ಮ ಸ್ವತ್ತು. ಇದನ್ನು ನೀವು ಸರಿಯಾಗಿ ನಿರ್ವಹಿಸಬೇಕು. ನನ್ನ ಅಧಿಕಾರದ ಅವಧಿ ಇಂದು ಕೊನೆಗೊಳ್ಳಲಿದೆ. ಕರಾವಳಿಯ ಮೂರು ಜಿಲ್ಲೆಯ ಜನರಿಗೆ ಅವಶ್ಯವಿರುವ ಅಭಿವೃದ್ಧಿ ಕಾಮಗಾರಿಯನ್ನು ಖುದ್ದು ಪರಿಶೀಲಿಸಿ ಮಾಡಿರುವ ಸಂತೃಪ್ತಿ ನನಗಿದೆ ಎಂದರು. ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದಿಸಿದರು.
ಜಿಪಂ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ಬಡ ಮೀನು ಗಾರರಿಗೆ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಿದ ನಿವೇದಿತ್ ಆಳ್ವ ಅವರು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿಂದೆ ಬಯಲು ಪ್ರದೇಶದಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ಕಾರ್ಯವಾಗಿದೆ. ಪ್ರಾಧಿಕಾರದ ಅಧ್ಯಕ್ಷರ ಭಾವಚಿತ್ರವನ್ನು ಮಾರುಕಟ್ಟೆಯಲ್ಲಿ ಇಡಲು ಗ್ರಾಪಂಗೆ ಸಲಹೆ ನೀಡಿದರು.
ತಾಪಂ ಅಧ್ಯಕ್ಷ ತುಕಾರಾಮ ನಾಯ್ಕ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ಮೊಗೇರ ಮಾತನಾಡಿದರು. ಈ ವೇಳೆ ಪ್ರಾಧಿಕಾರದಿಂದ ನಿರ್ಮಿಸುವ ಶಿರಸಿ ತಾಲೂಕಿನ 4 ಅಂಗನವಾಡಿ ಕಟ್ಟಡಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಕಾಂಗ್ರೆಸ್ ಯುವ ಮುಖಂಡ ರವಿಕುಮಾರ ಶೆಟ್ಟಿ, ಪ್ರದೀಪ್ ಶೆಟ್ಟಿ, ಮಾಜಿ ಜಿಪಂ ಸದಸ್ಯ ಕೃಷ್ಣ ಗೌಡ, ಗ್ರಾಪಂ ಉಪಾಧ್ಯಕ್ಷೆ ಕಲ್ಪನಾ ಮತ್ತಿತರರು ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಸ್ವಾಗತಿಸಿದರು.







