ಸಾಗರ: ಫುಟ್‌ಪಾತ್ ನಿರ್ಮಾಣಕೆ್ಕ ಪತ್ರಕರ್ತರಿಂದ ಡಿಸಿಗೆ ಮನವಿ
.jpg)
ಭಟ್ಕಳ, ಆ.26: ನಗರದ ಶಂಸುದ್ದೀನ್ ಸರ್ಕಲ್‌ನಿಂದ ಪೊಲೀಸ್ ಪರೇಡ್ ಮೈದಾನದ ವರೆಗೆ ಸುಮಾರು 8-10 ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಡಾಂಬರ್ ರಸ್ತೆಯ ಮೇಲೆಯೇ ನಡೆದು ಹೋಗುವುದು ಅನಿವಾರ್ಯವಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗೆ ವಾಟ್ಸ್‌ಆ್ಯಪ್ ದೂರು ಸಲ್ಲಿಸಿದೆ.
ಸಾಗರ ರಸ್ತೆಯ ಮಾರ್ಗವಾಗಿ ಶಾಲಾ-ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಬಿಇಒ ಕಚೇರಿ, ಪೊಲೀಸ್ ಕ್ವಾಟರ್ಸ್, ಪೊಲೀಸ್ ಪರೇಡ್ ಮೈದಾನ ಕೂಡಾ ಇದ್ದು ರಾಜ್ಯ ಹೆದ್ದಾರಿಯಾದ್ದರಿಂದ ವಾಹನ ದಟ್ಟಣೆಯೂ ಸಾಕಷ್ಟು ಇರುತ್ತದೆ. ಈ ರಸ್ತೆಯ ಮೂಲಕ ಪ್ರತಿದಿನ ಸಾವಿರಾರು ಜನರು ತಿರುಗಾಡುವುದರ ಜೊತೆಗೆ 3,000 ರಷ್ಟು ವಿದ್ಯಾರ್ಥಿಗಳಿಗೂ ಇದೇ ಮಾರ್ಗವಾಗಿ ಹೋಗುವುದು ಅನಿವಾರ್ಯವಾಗಿದೆ ಎಂದು ದೂರಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಗರ ರಸ್ತೆಯ ಇಕ್ಕೆಲಗಳಲ್ಲಿ ತಿರುಗಾಡಲು ಜಾಗವೇ ಇಲ್ಲ ವಾಗಿದ್ದು, ಶಂಸುದ್ದೀನ್ ಸರ್ಕಲ್‌ನಿಂದ ಆನಂದ ಆಶ್ರಮ ಕಾನ್ವೆಂಟ್‌ವರೆಗೆ ವಾಹನ ನಿಲುಗಡೆ, ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬಗಳು, ಕುರುಚಲು ಗಿಡಗಳು, ಗೂಡಂಗಡಿಗಳು, ವಾಹನ ರಿಪೇರಿಯ ತಾಣ, ರಾಜ್ಯ ಹೆದ್ದಾರಿಯ ವಾಹನ ದಟ್ಟಣೆ ಜೊತೆಗೆ ಬೆಳಗ್ಗೆಯ ಸಮಯ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನಿವಾರ್ಯವಾಗಿ ಡಾಂಬರ್ ರಸ್ತೆಯ ಮೇಲೆಯೇ ನಡೆದು ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದೇ ಮಾರ್ಗವಾಗಿ ಎಲ್‌ಕೆಜಿಯಿಂದ ಪಿಜಿವರೆಗಿನ ಮಕ್ಕಳು ಹೋಗಬೇಕಾಗಿರುವುದರಿಂದ ದಿನಾಲೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದೂ ಹೇಳಲಾಗಿದೆ. ಸಂಬಂಧ ಪಟ್ಟ ಇಲಾಖೆಗೆ ಸೂಕ್ತ ಸೂಚನೆಯನ್ನು ನೀಡಿ ಅನಾಹುತವಾಗುವ ಮೊದಲು ರಸ್ತೆಯ ಅಕ್ಕಪಕ್ಕದ ಅಡೆತಡೆಗಳನ್ನು ನಿವಾರಿಸಿ, ವಿದ್ಯುತ್ ಕಂಬಗಳನ್ನು ಫುಟ್‌ಪಾತ್ ಸ್ಥಳದಿಂದ ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ನಡೆದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದೂ ಸಂಘ ಮನವಿ ಮಾಡಿದೆ. ಸಂಘದ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ದೂರು ಸಂಖ್ಯೆ 3333ರಲ್ಲಿ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯು ದೊರೆತಿದೆ ಎನ್ನಲಾಗಿದೆ.





