ಸುಲಭವಾಗಿ ಸಾಗಿಸಲು ಶವದ ಮೂಳೆ ಮುರಿದು ಮುದ್ದೆ ಮಾಡಿದರು
ಬಲಸೋರ್, ಆ.26: ಆ್ಯಂಬುಲೆನ್ಸ್‌ಗೆ ನೀಡಲು ಹಣವಿಲ್ಲದೆ ವ್ಯಕ್ತಿಯೊಬ್ಬ ಮರಣ ಹೊಂದಿದ ಮಡದಿಯ ದೇಹವನ್ನು ತನ್ನ ಭುಜದಲ್ಲಿರಿಸಿ 30 ಕಿ.ಮಿ. ದೂರದ ತನ್ನ ಮನೆಯತ್ತ ಪುಟ್ಟ ಮಗಳೊಂದಿಗೆ ನಡೆದುಕೊಂಡು ಹೋದ ಘಟನೆ ಇನ್ನೂ ಎಲ್ಲರ ಮನದಲ್ಲೂ ಹಚ್ಚ ಹಸಿರಿರುವಾಗಲೇ ಒಡಿಶಾದಲ್ಲಿ ಇನ್ನೊಂದು ಭೀಭತ್ಸ ವೀಡಿಯೊ ಬಹಿರಂಗಗೊಂಡಿದೆ. ಈ ವೀಡಿಯೊದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರೈಲು ಬಡಿದು ಸತ್ತು ಹೋದ 70 ವರ್ಷದ ಮಹಿಳೆಯ ಶವದ ಮೂಳೆಯನ್ನು ತನ್ನ ಕಾಲುಗಳಿಂದ ಮುರಿದು ಅದನ್ನು ಒಂದು ಪ್ಲಾಸ್ಟಿಕ್ ಮೂಟೆಯಲ್ಲಿ ಕಟ್ಟಿ ಕೊಂಡೊಯ್ಯುವುದು ಕಾಣಿಸುತ್ತದೆ.
ಅವರು ಹೀಗೆ ಮಾಡಲು ಕಾರಣವನ್ನು ತಿಳಿದುಕೊಂಡರೆ ಆಶ್ಚರ್ಯವಾಗುತ್ತದೆ.ಸಲಮಣಿ ಬಾರಿಕ್ ಎಂಬ 76 ವರ್ಷದ ವಿಧವೆ ಬುಧವಾರದಂದು ರೈಲು ಬಡಿದು ಸಾವನ್ನಪ್ಪಿದ್ದಳು. ಆಕೆಯ ಮೃತ ದೇಹವನ್ನು ಬಲಸೋರ್ ಜಿಲ್ಲೆಯ ಸೋರೋ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಪೋಸ್ಟ್ ಮಾರ್ಟಂ ಸೌಲಭ್ಯವಿಲ್ಲದ ಕಾರಣ ಮೃತ ದೇಹವನ್ನು 30 ಕಿ.ಮಿ . ದೂರ ಪಟ್ಟಣಕ್ಕೆ ಕೊಂಡೊಯ್ಯಲು ರೈಲ್ವೆ ಪೊಲೀಸರು ನಿರ್ಧರಿಸಿದ್ದರು. ಆದರೆ ಅಲ್ಲಿ ಆ್ಯಂಬುಲೆನ್ಸ್ ಲಭ್ಯವಿರಲಿಲ್ಲ. ಆಟೋದಲ್ಲಿ ಮೃತದೇಹ ಕೊಂಡೊಯ್ಯುವುದು ದುಬಾರಿಯಾಗುವುದರಿಂದ ಪೊಲೀಸರು ಮೃತ ದೇಹವನ್ನು ರೈಲಿನಲ್ಲಿ ಕೊಂಡುಹೋಗಲು ನಿರ್ಧರಿಸಿ ಆಸ್ಪತ್ರೆಯ ಸ್ವೀಪರ್‌ಗೆ ಆದೇಶ ನೀಡಿದ್ದರು. ಇದನ್ನು ಹಾಗೆಯೇ 2 ಕಿ.ಮಿ. ದೂರದ ರೈಲ್ವೆ ನಿಲ್ದಾಣಕ್ಕೆ ಕೊಂಡೊಯ್ಯುವುದು ಕಷ್ಟವೆಂದು ತಿಳಿದಾಗ ಆಸ್ಪತ್ರೆಯ ಸ್ವೀಪರ್ ಅದರ ಮೂಳೆ ಮುರಿದು ಮೂಟೆಯಲ್ಲಿ ಕೊಂಡು ಹೋಗಲು ತೀರ್ಮಾನಿಸಿದ್ದನು. ಈ ಘಟನೆಯ ಬಗ್ಗೆ ಒಡಿಶಾ ಮಾನವ ಹಕ್ಕುಗಳ ಆಯೋಗ ರೈಲ್ವೆ ಪೊಲೀಸರು, ಬಲಸೋರ್ ಜಿಲ್ಲಾಡಳಿತದಿಂದ ವಿವರಣೆ ಕೇಳಿದೆ.





