ಮಹಾರಾಷ್ಟ್ರದ ಆಂತರಿಕ ಭದ್ರತಾ ಕಾನೂನು ತುರ್ತು ಪರಿಸ್ಥಿತಿಗೆ ಸಮ
ಫಡ್ನವೀಸ್ ಸರಕಾರದ ವಿರುದ್ಧ ಶಿವಸೇನೆ ವಾಗ್ದಾಳಿ
ಮುಂಬೈ, ಆ.26: ಮಹಾರಾಷ್ಟ್ರದ ಪ್ರಸ್ತಾವಿತ ಆಂತರಿಕ ಭದ್ರತಾ ಕಾನೂನು ‘ಪ್ರಜಾಪ್ರಭುತ್ವಕ್ಕೆ ಆಘಾತವಾಗಿದೆ’ ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆಯಿಂದು ದೇವೇಂದ್ರ ಫಡ್ನವೀಸ್ ಸರಕಾರವನ್ನು ಮತ್ತೆ ತಿವಿದಿದೆ. ರಾಜ್ಯ ಸರಕಾರವು ಮಹಾರಾಷ್ಟ್ರದಲ್ಲಿ 1975ರ ತುರ್ತು ಪರಿಸ್ಥಿತಿಯಂತಹ ಸನ್ನಿವೇಶವನ್ನು ಹೇರಲು ಪ್ರಯತ್ನಿಸುತ್ತಿದೆಯೆಂದು ಅದು ಆರೋಪಿಸಿದೆ.
ಸರಕಾರವು ಆಂತರಿಕ ಭದ್ರತಾ ಕಾನೂನಿನ ಹೆಸರಿನಲ್ಲಿ ರಾಜ್ಯದಲ್ಲಿ ತುರ್ತ ಪರಿಸ್ಥಿತಿಯನ್ನು ಹೇರಲು ಪ್ರಯತ್ನಿಸಿದರೆ, ಅದನ್ನು ವಿರೋಧಿಸಬೇಕಾಗಿದೆ. ಈ ಕಾನೂನು 1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದೆಂದು ಶಿವಸೇನೆಯು ತನ್ನ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯವೊಂದರಲ್ಲಿ ಹೇಳಿದೆ.
ಇಂದು ಅಧಿಕಾರದಲ್ಲಿರುವವರು(ಬಿಜೆಪಿ) ಆಗಿನ ಸರಕಾರದ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದರು. ಆದರೆ ಆಗ, ಜನಸಾಮಾನ್ಯರು ಕಷ್ಟ ಅನುಭವಿಸಿದ್ದರೆಂದು ಸಾಬೀತುಪಡಿಸುವ ಯಾವುದೇ ದೂರು ಇಲ್ಲವೆಂದು ಅದು ಪ್ರತಿಪಾದಿಸಿದೆ.
ಫಡ್ನವೀಸ್ ಸರಕಾರದ ಪ್ರಸ್ತಾವಿತ ಕಾನೂನು ಆಂತರಿಕ ಭದ್ರತೆಯ ಕುರಿತು ರಾಜ್ಯಮಟ್ಟದ ಅಂತಹ ಕಾನೂನುಗಳಲ್ಲೇ ಮೊದಲಿನದಾಗಲಿದೆ. ಅದು ಭಯೋತ್ಪಾದನಾ ಪಿತೂರಿಯ ಶಂಕಿತರ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ಅಭೂತಪೂರ್ವ ಅಧಿಕಾರ ನೀಡಲಿದೆ. ಅದು ಶಸ್ತ್ರಾಸ್ತ್ರ, ಸ್ಫೋಟಕಗಳ ಸಾಗಾಟ ಹಾಗೂ ಲೆಕ್ಕ ನೀಡದ ಹಣದ ಹರಿವು ನಿಷೇಧಿತವಾಗಿರುವ ವಿಶೇಷ ಭದ್ರತಾ ವಲಯಗಳನ್ನು ಪ್ರಸ್ತಾವಿಸಿದೆ.
ಇದು ಜನರ ಸ್ವಾತಂತ್ರವನ್ನು ಕೊಲ್ಲುವ ಹಾಗೂ ಪ್ರಜಾಸತ್ತೆಗೆ ಆಘಾತ ನೀಡುವ ಪ್ರಯತ್ನವಾಗಿದೆ. ಆಂತರಿಕ ಭದ್ರತೆಗೆ ಬೆದರಿಕೆಯೊಡ್ಡುವಂತಹದು ಹಠಾತ್ತಾಗಿ ರಾಜ್ಯದಲ್ಲಿ ಏನು ನಡೆದಿದೆ? ತುರ್ತು ಪರಿಸ್ಥಿತಿಯನ್ನು ಹೇರಲೇ ಬೇಕಾಗಿದ್ದರೆ ಕಾಶ್ಮೀರದಲ್ಲಿ ಅಥವಾ ಪತ್ರಕರ್ತರ ಹತ್ಯೆ, ದಲಿತ ದೌರ್ಜನ್ಯ ನಡೆಯುತ್ತಿರುವ ಗುಜರಾತ್‌ನಲ್ಲಿ ಹೇರಬೇಕೆಂದು ಶಿವಸೇನೆ ವಾಗ್ದಾಳಿ ನಡೆಸಿದೆ.
ಪ್ರಸ್ತಾವಿತ ಕಾನೂನು, ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವ ಜನರನ್ನು ಮಟ್ಟಹಾಕಲು ಪೊಲೀಸರಿಗೆ ಅತಿಯಾದ ಅಧಿಕಾರ ನೀಡಲಿದೆಯೆಂಬುದು ಶಿವಸೇನೆಯ ಪ್ರತಿಪಾದನೆಯಾಗಿದೆ.
ನಾಳೆ ಅಮಿತಾಭ್ ಬಚ್ಚನ್ 100 ಮಂದಿ ಅಭಿಮಾನಿಗಳೊಂದಿಗೆ ಬಂದರೆ ಅಥವಾ ಶಿವಸೇನಾ ಕಚೇರಿಯ ಹೊರಗೆ 100ಕ್ಕೂ ಹೆಚ್ಚು ಕುತೂಹಲಿಗರನ್ನು ಕಂಡರೆ ಆಗ, ಅವರೆಲ್ಲರನ್ನು ಕಂಬಿಗಳ ಹಿಂದಿರಿಸಲಾಗುವುದೇ? ಎಂದು ಅದು ಪ್ರಶ್ನಿಸಿದೆ.





