ಶಾಂತಿಯುತ ಗಣೇಶೋತ್ಸವ ಆಚರಣೆಗೆ ಕ್ರಮ: ಎಸ್ಪಿ
ಗೂಂಡಾಗಿರಿ ಸಹಿಸಲ್ಲ: ನೂತನ ಎಸ್ಪಿ ಅಭಿನವ್ ಖರೇ ಹೇಳಿಕೆ

ಶಿವಮೊಗ್ಗ, ಆ. 26: ಗೂಂಡಾಗಳ ನಿಗ್ರಹಕ್ಕೆ ಒತ್ತು ನೀಡುವುದರ ಜೊತೆಗೆ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು. ಮುಂಬರುವ ಗಣೇಶೋತ್ಸವ ಸಮಾರಂಭವನ್ನು ಸುಗಮ-ಶಾಂತಿಯುತವಾಗಿ ನಡೆಸಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೇ ತಿಳಿಸಿದ್ದಾರೆ.
ಶುಕ್ರವಾರ ನಗರದ ಬಿ.ಎಚ್.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಿಗರ್ಮಿತ ಎಸ್ಪಿ ರವಿ ಡಿ. ಚೆನ್ನಣ್ಣನರವರಿಂದ ಅಧಿಕಾರ ಸ್ವೀಕರಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರವಿ ಡಿ. ಚೆನ್ನಣ್ಣನರವರು ಗಣಪತಿ ಹಬ್ಬಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂದೋಬಸ್ತ್ ಗೆ ಸಂಬಂಧಿಸಿದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಅದರಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಅನುಸರಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಈಗಿರುವ ಮಾರ್ಗಸೂಚಿಗಳನ್ನೇ ಮುಂದುವರಿಸಿಕೊಂಡು ಹೋಗಲಾಗುವುದು. ಒಟ್ಟಾರೆ ಗಣಪತಿ ಉತ್ಸವವು ಜಿಲ್ಲೆಯಾದ್ಯಂತ ಸುಗಮ-ಶಾಂತಿಯುತವಾಗಿ ನಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಒತ್ತು:
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಜೊತೆಗೆ ಪೊಲೀಸ್ ಕಲ್ಯಾಣ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುವುದು. ಮೈಸೂರು ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದ್ದಾರೆ. ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿನ ಸಂಚಾರ ವ್ಯವಸ್ಥೆ ಸೇರಿದಂತೆ ಸಾರ್ವಜನಿಕರಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪಟ್ಟಿ ಮಾಡಿ ಆದ್ಯತೆ ಮೇರೆ ಅವುಗಳನ್ನು ಪರಿಹರಿಸಲು ಗಮನಹರಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ. ಒಂದೇ ಬ್ಯಾಚ್:
ರವಿ ಡಿ. ಚೆನ್ನಣ್ಣನವರ್ ಹಾಗೂ ತಾವು ಒಂದೇ ಬ್ಯಾಚ್‌ನವ ರಾಗಿದ್ದೇವೆ. ಅವರು ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಇದೇ ಸಂದಭರ್ದಲ್ಲಿ ಅಭಿನವ್ ಖರೇಹೇಳಿದರು.
ಸಕ್ರಿಯವಾಗುತ್ತಿವೆ ಮಾಫಿಯಾ ಗ್ಯಾಂಗ್‌ಗಳು:
ರವಿ ಡಿ. ಚೆನ್ನಣ್ಣನರವರು ವರ್ಗಾವಣೆಗೊಳ್ಳುತ್ತಿದ್ದಂತೆ ಶಿವಮೊಗ್ಗ ನಗರದಲ್ಲಿ ಕೆಲ ಮಾಫಿಯಾ ಗ್ಯಾಂಗ್, ಕ್ರಿಮಿನಲ್‌ಗಳು ಮತ್ತೆ ಸಕ್ರಿಯವಾಗುತ್ತಿದ್ದು, ಮತ್ತೆ ತಮ್ಮ ದಂಧೆ ಶುರು ಮಾಡುವ ಸನ್ನಾಹ ನಡೆಸುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. ಈ ಬಗ್ಗೆ ನೂತನ ಎಸ್ಪಿ ಅಭಿನವ್ ಖರೇಯವರು ಎಚ್ಚರವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಶಿವಮೊಗ್ಗ ನಗರದಲ್ಲಿ ಕ್ರಿಮಿನಲ್‌ಗಳು ಮತ್ತೆ ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮಾಫಿಯಾ ಗ್ಯಾಂಗ್ ಹಾಗೂ ಕ್ರಿಮಿನಲ್‌ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಕೆಲಸಗಳನ್ನು ಮಾಡಬೇಕಾಗಿದೆ ಎಂದು ನಾಗರಿಕರು ಸಲಹೆ ನೀಡುತ್ತಾರೆ.
ನೂತನ ಎಸ್ಪಿಯ ಮುಂದಿದೆ ಗಣೇಶೋತ್ಸವದ ಸವಾಲು!:
ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೇಯವರಿಗೆ ಮುಂಬರುವ ಗಣೇಶೋತ್ಸವ ಹಬ್ಬ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆಯ ಪ್ರಮುಖ ಗಣಪತಿಗಳ ಮೆರವಣಿಗೆಯನ್ನು ಸುಗಮ-ಶಾಂತಿಯುತವಾಗಿ ನಡೆಸುವ ಗುರುತರ ಜವಾಬ್ದಾರಿ ನೂತನ ಎಸ್ಪಿಯ ಮೇಲಿದೆ. ಈ ನಿಟ್ಟಿನಲ್ಲಿ ಅಭಿನವ್ ಖರೇಯವರು ಕೈಗೊಳ್ಳುವ ಭದ್ರತಾ ಕ್ರಮಗಳ ಬಗ್ಗೆ ಜಿಲ್ಲೆಯ ನಾಗರಿಕರಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ. ಎಚ್ಚರವಾಗಿರಬೇಕು: ನೂತನ ಎಸ್ಪಿ ಅಭಿನವ್ ಖರೇಯವರು ಗಣೇಶ ಹಬ್ಬದ ಜವಾಬ್ದಾರಿ ನಿರ್ವಹಣೆಯನ್ನು ಅತ್ಯಂತ ಎಚ್ಚರಿಕೆ, ಚಾಕಚಕ್ಯತೆ, ಸೂಕ್ಷ್ಮತೆಯಿಂದ ನಡೆಸಬೇಕಾಗಿದೆ.







