‘ಸಮಾನತೆಯ ಕನಸು ಕನಸಾಗಿಯೇ ಉಳಿದಿದೆ: ಮಲ್ಲಿಕಾರ್ಜುನ ಹಕ್ರೆ
ರಾಜ್ಯಶಾಸ್ತ್ರ ವೇದಿಕೆ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
.jpg)
ಸಾಗರ, ಆ.26: ಬಸವಾದಿ ಶರಣರು ಪ್ರತಿಪಾದಿಸಿದ ಸಮ ಸಮಾಜದ ಕನಸು ಕೇವಲ ಕನಸಾಗಿಯೆ ಉಳಿದಿದೆ. ಭೂಸುಧಾರಣೆ ಕಾರ್ಯಕ್ರಮಗಳು ಸ್ವಲ್ಪಮಟ್ಟಿನ ಸಮಾನತೆಯನ್ನು ತರಲು ನೆರವಾಗಿವೆೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಇಲ್ಲಿನ ಇಂದಿರಾಗಾಂಧಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ರಾಜ್ಯಶಾಸ್ತ್ರ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣದ ವಿಷವರ್ತುಲದಿಂದ ರಾಜಕಾರಣ ಎನ್ನುವುದು ಉದ್ಯಮಿಗಳ, ಹಣವಂತರ ಕಪಿಮುಷ್ಟಿಗೆ ಸಿಲುಕಿದೆ. ಇದರಿಂದ ರೈತರು ಭೂರಹಿತರು, ಜನಸಾಮಾನ್ಯರ ನೋವುಗಳಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆ ಇಲ್ಲದಂತೆ ಆಗಿದೆ. ಇಂದಿಗೂ ಜನಸಾಮಾನ್ಯರು ನೋವಿನಲ್ಲೆ ದಿನಕಳೆಯುವಂತೆ ಆಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತಿದೆ ಎಂದರು. ರಾಜಕೀಯ ಎನ್ನುವುದು ಹಣಗಳಿಸುವ ಉದ್ಯಮವಾಗಿದೆ. ಯುವಜನಾಂಗದ ದೃಷ್ಟಿ ನಗರ ಕೇಂದ್ರಿತವಾಗುತ್ತಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಮತದಾರ, ಜನತೆ, ಪ್ರಭುತ್ವ ಎಚ್ಚೆತ್ತುಕೊಳ್ಳದೆ ಹೋದರೆ ಭವಿಷ್ಯ ಕರಾಳವಾಗುತ್ತದೆ. ಮಲೆನಾಡಿನ ಪರಿಸರ ಸಮಸ್ಯೆ, ಪರಿಭಾವಿತ ಅರಣ್ಯ, ಪಶ್ಚಿಮಘಟ್ಟವನ್ನು ಅತೀಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಮುಂದಾಗಿರುವುದು ಇನ್ನಿತರೆ ಜ್ವಲಂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿ ಸಮೂಹ ಅರ್ಥ ಮಾಡಿಕೊಳ್ಳಬೇಕು ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದ ಶಿವಮೊಗ್ಗ ಕೆಎನ್‌ಎಂಸಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎ.ಪಿ. ಒಂಕಾರಪ್ಪ, ಜಗತ್ತಿನ ಎರಡನೆ ಅತೀದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಅರ್ಥಪೂರ್ಣವಾಗಿ ಮುಂದುವರಿಯಲು ಚುನಾವಣಾ ಸುಧಾರಣೆಗಳ ಅಗತ್ಯವಿದೆ. ಚುನಾವಣೆಗಳಲ್ಲಿ ಪ್ರಸ್ತುತ ತೋಳ್ಬಲ ಕಡಿಮೆಯಾಗಿದ್ದರೂ ಹಣಬಲ, ರಾಜಕೀಯ ಅಪರಾಧೀಕರಣಗಳಿಂದಾಗಿ ಮುಕ್ತ, ನ್ಯಾಯಸಮ್ಮತ, ನಿರ್ಭೀತ ಚುನಾವಣೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದರು. ಇಂದು ರಾಜಕೀಯ ಕ್ಷೇತ್ರಕ್ಕೆ ಯುವಶಕ್ತಿ ಪ್ರವೇಶ ಅಗತ್ಯವಿದೆ. ಹೊಸಬರು ರಾಜಕೀಯ ಪ್ರವೇಶ ಮಾಡುವುದರಿಂದ ಆಲೋಚನೆ, ಉತ್ಸಾಹಗಳ ಮೂಲಕ ಹೊಸ ಗಾಳಿ ಬೀಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸುಭದ್ರ ಸರಕಾರಗಳ ರಚನೆ ನಮ್ಮ ಆದ್ಯತೆಯಾಗಬೇಕು ಎಂದರು. ಪ್ರಾಚಾರ್ಯ ಪಿ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು.





