ಆರೈಕೆ ಕೇಂದ್ರ ಸ್ಥಳಾಂತರ ವಿರೋಧಿಸಿ ಜಿಲ್ಲಾಡಳಿತಕ್ಕೆ ಮನವಿ
ಶಿವಮೊಗ್ಗ, ಆ.26: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಗುಡ್‌ಲಕ್ ಸರ್ಕಲ್ ಸಮೀಪವಿದ್ದ ಹಿರಿಯ ನಾಗರಿಕರ ಹಗಲು ಆರೈಕೆ ಕೇಂದ್ರವನ್ನು ಏಕಾಏಕಿಯಾಗಿ ವಿನೋಬನಗರಕ್ಕೆ ಸ್ಥಳಾಂತರಿಸುವುದರಿಂದ ಹಿರಿಯ ನಾಗರಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಆರೋಪಿಸಿ ಶುಕ್ರವಾರ ನಗರದ ಡಿ.ಸಿ. ಕಚೇರಿ ಆವರಣದಲ್ಲಿ ಹಿರಿಯ ನಾಗರಿಕರು ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು. ಆರೈಕೆ ಕೇಂದ್ರದ ಸಂಘದ ಪದಾಧಿಕಾರಿಗಳು ಏಕಪಕ್ಷಿಯವಾಗಿ ಕೇಂದ್ರ ಸ್ಥಳಾಂತರದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಹಿರಿಯ ನಾಗರಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವಿನೋಬನಗರದಲ್ಲಿ ತೆರೆಯಲಾಗಿರುವ ಕೇಂದ್ರವು ಮಹಡಿ ಮನೆಯ ಮೇಲಿದೆ. ಇದರಿಂದ ತೀವ್ರ ತೊಂದರೆ ಉಂಟಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಹಿರಿಯ ನಾಗರಿಕರ ಮತ್ತು ಸಬಲೀಕರಣ ಇಲಾಖೆಯ ಯೋಜನಾಧಿಕಾರಿಯವರಿಗೆ ಮನವಿ ಅರ್ಪಿಸಲಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಕೇಂದ್ರದ ಸದಸ್ಯರಿಗೆ ಲಘು ಉಪಾಹರ ನೀಡುವ ಕೆಲಸ ಮಾಡುತ್ತಿಲ್ಲ. ಗುರುತಿನ ಚೀಟಿ ನೀಡಿಲ್ಲ. ಕೇಂದ್ರದ ಕಾರ್ಯದರ್ಶಿ ಸಂಪರ್ಕಕ್ಕೆ ಸಿಗುತ್ತಿಲ್ಲ. ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಹಿರಿಯ ನಾಗರಿಕರಿಗೆ ನೆರವಾಗುವ ಕೆಲಸ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸಲ್ಲಿಕೆ ಸಂದಭರ್ದಲ್ಲಿ ವೆಂಕಟೇಶಪ್ಪ, ಜಿಎನ್ ಬಸವರಾಜಪ್ಪ, ಆರ್.ಎಸ್. ಪಾಲಾಕ್ಷಪ್ಪ, ಪ್ರೇಮಾಕುಮಾರಿ, ನಾಗರತ್ನ್ನಾ, ವೆಂಕಟ್‌ರಾವ್, ನಾರಾಯಣಮೂರ್ತಿ, ಧರ್ಮಯ್ಯಗೌಡ, ಜಗದೀಶ್, ಜಿ. ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





