ಯುಎಸ್ ಟೆನಿಸ್ ಟೂರ್ನಿ: ಸೆಮಿಫೈನಲ್ನಲ್ಲಿ ಜೊಕೊವಿಕ್ಗೆ ನಡಾಲ್ ಎದುರಾಳಿ
ನ್ಯೂಯಾರ್ಕ್, ಆ.26: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಹಾಗೂ ಎರಡು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಯುಎಸ್ ಓಪನ್ನ ಡ್ರಾ ಪ್ರಕ್ರಿಯೆ ಶುಕ್ರವಾರ ಇಲ್ಲಿ ನಡೆದಿದ್ದು, ಒಲಿಂಪಿಕ್ಸ್ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದ ಜೊಕೊವಿಕ್ ಯುಎಸ್ ಓಪನ್ನಲ್ಲಿ ಪೊಲೆಂಡ್ನ ಜೆರ್ಝಿ ಜಾನೊವಿಝ್ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಇತ್ತೀಚೆಗೆ ರಿಯೋ ಒಲಿಂಪಿಕ್ಸ್ನಲ್ಲಿ ಡಬಲ್ಸ್ ಪಂದ್ಯದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ 4ನೆ ಶ್ರೇಯಾಂಕದ ನಡಾಲ್ ಮೊದಲ ಸುತ್ತಿನ ಪಂದ್ಯದಲ್ಲಿ ಉಝ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್ರನ್ನು ಎದುರಿಸಲಿದ್ದಾರೆ.
2ನೆ ಶ್ರೇಯಾಂಕದ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ಝೆಕ್ನ ಲುಕಾಸ್ ರಸೊಲ್ರನ್ನು ಎದುರಿಸುವ ಮೂಲಕ ಯುಎಸ್ ಓಪನ್ ಅಭಿಯಾನ ಆರಂಭಿಸಲಿದ್ದಾರೆ. ರೋಜರ್ ಫೆಡರರ್ ಮಂಡಿನೋವಿನಿಂದ ಬಳಲುತ್ತಿರುವ ಕಾರಣ ಈ ವರ್ಷ ಆಡುತ್ತಿಲ್ಲ. ಸ್ವಿಸ್ನ ಇನ್ನೋರ್ವ ಆಟಗಾರ ವಾವ್ರಿಂಕ 3ನೆ ಶ್ರೇಯಾಂಕ ಪಡೆದಿದ್ದಾರೆ. ವಾವ್ರಿಂಕ ಮೊದಲ ಸುತ್ತಿನಲ್ಲಿ ಸ್ಪೇನ್ನ ಫೆರ್ನಾಂಡೊ ವೆರ್ಡಾಸ್ಕೊರನ್ನು ಎದುರಿಸಲಿದ್ದಾರೆ.
ಯುಎಸ್ ಓಪನ್ ಆ.29 ರಿಂದ ಸೆ.11ರ ತನಕ ನಡೆಯಲಿದೆ.